ಮಂಗಳೂರು: ದಕ್ಷಿಣ ಕನ್ನಡ, ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳನೊಳಗೊಂಡ ಲಯನ್ಸ್ ಜಿಲ್ಲೆ 317ಡಿಯ ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಪ್ರತಿ ವರ್ಷ ಕನ್ನಡದ ಯುವ ಸಾಹಿತಿಗಳು, ಸಾಂಸ್ಕೃತಿಕ ಸಾಧಕರು, ಸಂಘಟಕರಿಗೆ ನೀಡುವ ಕದ್ರಿ ಲಯನ್ಸ್ ಕನ್ನಡ ರತ್ನ (ಕಲಕ) ಪ್ರಶಸ್ತಿಯ 2022ನೇ ಸಾಲಿಗೆ ಸಾಹಿತಿ, ಕಾದಂಬರಿಕಾರ ವಿವೇಕಾನಂದ ಕಾಮತ್ ಇವರು ಆಯ್ಕೆಯಾಗಿದ್ದಾರೆ.
ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪದವೀಧರರಾಗಿರುವ ಇವರು, 1998ರಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡು 150ಕ್ಕೂ ಹೆಚ್ಚು ಕಥೆಗಳನ್ನು ಬರೆದಿದ್ದಾರೆ. ಮುಖ್ಯವಾಗಿ ಕನ್ನಡದ ಬಹುತೇಕ ಪತ್ರಿಕೆಗಳಲ್ಲಿ ಇವರ ಕಾದಂಬರಿಗಳು ಧಾರಾವಾಹಿಯಾಗಿ ಪ್ರಕಟವಾಗಿದ್ದು ೬೦ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ ಹಾಗೂ ಇವರ ‘ಅಜ್ಞಾತ’ ಕಾದಂಬರಿ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಇದರೊಂದಿಗೆ ಮಕ್ಕಳ ಚಲನಚಿತ್ರಗಳು ಮತ್ತು ಕಿರುಚಿತ್ರಗಳ ಸಂಭಾಷಣೆಯನ್ನು ಬರೆದಿದ್ದು, ಇವರು ಬರೆದ ಒಂದು ಕಥೆ ಚಲನಚಿತ್ರವಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅರಳು ಸಾಹಿತ್ಯ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿ ಸನ್ಮಾನಗಳು ಇವರಿಗೆ ದೊರಕಿದೆ.
ಕಲಕ ಪ್ರಶಸ್ತಿಯ ರೂಪಾಯಿ ಹತ್ತು ಸಾವಿರ ಪ್ರಶಸ್ತಿ ಮೊತ್ತ ಫಲಕಗಳನ್ನು ಒಳಗೊಂಡಿದ್ದು ಜನವರಿ ೧೩ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ ಲಯನ್ಸ್ ಜಿಲ್ಲೆಯ ಲಯನ್ಸ್ ಕನ್ನಡ ಕಲರವ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರದಾನಿಸಲಾಗುವುದು ಎಂದು ಲಯನ್ಸ್ ಜಿಲ್ಲಾ ಸಂಯೋಜಕ ಎನ್. ಟಿ. ರಾಜ ಹಾಗೂ ಲಯನ್ಸ್ ಅಧ್ಯಕ್ಷೆ ಸುಮಿತ್ರಾ ಶೆಟ್ಟಿ ಜಂಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.