ವಿವಾಹಿತ ಮಹಿಳೆಗೆ ಅಶ್ಲೀಲ ಸಂದೇಶ: ಓರ್ವ ಬಂಧನ

ಮಂಗಳೂರು: ವಿವಾಹಿತ ಮಹಿಳೆಗೆ ಅಶ್ಲೀಲ ಚಿತ್ರ, ಸಂದೇಶಗಳನ್ನು ಕಳುಹಿಸುತ್ತಿದ್ದ ಪುತ್ತೂರಿನ ವ್ಯಕ್ತಿಯೊಬ್ಬನನ್ನು ಮಂಗಳೂರು ನಗರದ ಸೈಬರ್ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ‌ ಪುತ್ತೂರು ಪಡ್ನೂರಿನ ನೆಹರೂ ನಗರ ನಿವಾಸಿ ಗಿರೀಶ್ ಕೆ.ಪಿ. ಬಂಧಿತ ಆರೋಪಿ. ಈತನನ್ನು ಶನಿವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈತ ವಾಟ್ಸ್‌ ಆ್ಯಪ್‌ ಮೂಲಕ ಅಶ್ಲೀಲ ಚಿತ್ರ, ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳೆಯೊಬ್ಬರು ಸೈಬರ್‌ ಅಪರಾಧ ಠಾಣೆಗೆ ದೂರು ನೀಡಿದ್ದರು. ಆರೋಪಿ ವೃತ್ತಿಯಲ್ಲಿ ಆಪ್ತ ಸಮಾಲೋಚಕನಾಗಿದ್ದಾನೆ. ಶಾಲಾ ಕಾಲೇಜುಗಳಿಗೆ ತೆರಳಿ ಆಪ್ತ ಸಮಾಲೋಚನೆ ನಡೆಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.