ಉಡುಪಿ ಕೃಷ್ಣಮಠದಲ್ಲಿ ಸೆ. 10ರಂದು ಕೃಷ್ಣ ಜನ್ಮಾಷ್ಟಮಿ: ಜಿಲ್ಲಾಡಳಿತದ ಸೂಚನೆಯಂತೆ ವಿಟ್ಲಪಿಂಡಿ ಉತ್ಸವ

ಉಡುಪಿ: ಇಲ್ಲಿನ ಶ್ರೀಕೃಷ್ಣನ ಮಠದಲ್ಲಿ ಸೆಪ್ಟೆಂಬರ್ 10ರಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಲಾಗುತ್ತದೆ.

ಮರುದಿನ ಸೆ. 11ರಂದು ರಥಬೀದಿಯಲ್ಲಿ ನಡೆಯುವ ವಿಟ್ಲಪಿಂಡಿ ಆಚರಣೆಯನ್ನು ಜಿಲ್ಲಾಡಳಿತದ ನಿರ್ದೇಶನದಂತೆ ನೆರವೇರಿಸಲಾಗುವುದು ಎಂದು ಪರ್ಯಾಯ ಅದಮಾರುಮಠದ ಈಶಪ್ರಿಯತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಇಂದು ಕೃಷ್ಣಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 10ರಂದು ಮಧ್ಯರಾತ್ರಿ 12.16ಕ್ಕೆ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಲಾಗುವುದು. ಬೆಳಿಗ್ಗೆ ಮಹಾಪೂಜೆ, ನೈವೇದ್ಯ, ವಿಶೇಷ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮ ನೆರವೇರಲಿದೆ ಎಂದು ಮಾಹಿತಿ ನೀಡಿದರು.

ಸೆ. 11ರಂದು ಕೃಷ್ಣ ಲೀಲೋತ್ಸವ (ವಿಟ್ಲ ಪಿಂಡಿ) ರಥಬೀದಿಯಲ್ಲಿ ನಡೆಯುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ಸಾಧ್ಯತೆ ಇದೆ. ಹಾಗಾಗಿ ಜಿಲ್ಲಾಡಳಿತದೊಂದಿಗೆ ಈ ಬಗ್ಗೆ ಚರ್ಚಿಸುತ್ತೇವೆ. ಜಿಲ್ಲಾಡಳಿತದ ಸೂಚನೆಯಂತೆ ಆಚರಿಣೆ ಮಾಡುತ್ತೇವೆ ಎಂದು ಸ್ವಾಮೀಜಿ ತಿಳಿಸಿದರು.