ಉಡುಪಿ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಎಡನೀರು ತೋಟಕಾಚಾರ್ಯ ಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ಜಯರಾಮ ಮಂಜತ್ತಾಯ (ಸಚ್ಚಿದಾನಂದ ಭಾರತೀ ಸ್ವಾಮೀಜಿ) ಅವರು ತಮ್ಮ ಸನ್ಯಾಸ ದೀಕ್ಷಾ ಪೂರ್ವಭಾವಿ ತೀರ್ಥಕ್ಷೇತ್ರ ಸಂಚಾರ ಪ್ರಯುಕ್ತ ಶುಕ್ರವಾರ ಉಡುಪಿಗೆ ಭೇಟಿ ನೀಡಿದರು.
ಉಡುಪಿ ಕೃಷ್ಣಮುಖ್ಯಪ್ರಾಣ ದೇವರ ದರ್ಶನ ಪಡೆದ ಬಳಿಕ ಶ್ರೀಮದನಂತೇಶ್ವರ ಸನ್ನಿಧಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲಿರುವ ಜಗದ್ಗುರು ಶ್ರೀ ಮಧ್ವಾಚಾರ್ಯರ ಅದೃಶ್ಯ ಸನ್ನಿಧಾನದ ದರ್ಶನ ಪಡೆದರು.
ಬಳಿಕ ಪರ್ಯಾಯ ಅದಮಾರು ಮಠದ ಈಶಪ್ರಿಯ ಸ್ವಾಮೀಜಿ, ಹಿರಿಯ ವಿಶ್ವಪ್ರಿಯ ಸ್ವಾಮೀಜಿ ಭೇಟಿ ಮಾಡಿ ಆಶೀರ್ವಾದ ಪಡೆದರು. ಆ ನಂತರ ಕೃಷ್ಣಾಪುರ ಮಠದ ವಿದ್ಯಾಸಾಗರ ಸ್ವಾಮೀಜಿ, ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಹಾಗೂ ಕಾಣಿಯೂರು ಮಠದ ವಿದ್ಯಾವಲ್ಲಭ ಸ್ವಾಮೀಜಿ ಭೇಟಿ ಮಾಡಿದರು.
ತಮ್ಮ ಮುಂದಿನ ಯತಿ ನಡೆಗೆ ಎಲ್ಲರ ಸಹಕಾರ ಕೋರಿ ಶ್ರೀ ಮಠದೊಂದಿಗೆ ಉಡುಪಿ ಅಷ್ಟಮಠಗಳ ಎಲ್ಲ ಬಾಂಧವ್ಯ, ಪ್ರೀತಿ ವಿಶ್ವಾಸಗಳು ಈ ಹಿಂದಿನಂತೆ ಮುಂದುವರೆಸುವಂತೆ ಅಪೇಕ್ಷಿಸಿದರು.
ಎಲ್ಲ ಮಠಾಧೀಶರೂ ಎಡನೀರು ಮಠದ ಕೀರ್ತಿಶೇಷ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಸಾಧನೆಗಳು, ಉದಾರಗುಣ, ಆತಿಥ್ಯ, ಬಾಂಧವ್ಯಗಳನ್ನು ವಿಶೇಷವಾಗಿ ಸ್ಮರಿಸಿದರು. ಅದೇ ರೀತಿಯ ನಂಟು ಮುಂದುವರೆಸುವುದಾಗಿ ಜಯರಾಮ ಮಂಜತ್ತಾಯರಿಗೆ ಭರವಸೆ ನೀಡಿದರು.
ಮುಂಬರುವ ವಿಜಯದಶಮಿಯಂದು ನೆರವೇರಲಿರುವ ಸನ್ಯಾಸ ದೀಕ್ಷಾ ಕಾರ್ಯಕ್ರಮಗಳಿಗೆ ಶುಭಕೋರಿದರು. ಪರ್ಯಾಯ ಮಠದ ವ್ಯವಸ್ಥಾಪಕರಾದ ಗೋವಿಂದರಾಜ್, ಶ್ರೀಶ ಭಟ್ ಕಡೆಕಾರ್, ಕುಂಟಾರು ರವೀಶ ತಂತ್ರಿ ಹಾಗೂ ವಾಸುದೇವ ಭಟ್ ಪೆರಂಪಳ್ಳಿ ಇದ್ದರು.