ವಿಶ್ವೇಶತೀರ್ಥ ಶ್ರೀಪಾದರ ಸಂಸ್ಮರಣೆ; ಶ್ರೀಗಳೇ ನೆಟ್ಟ ಸಸಿಗಳಿಗೆ ಆವರಣಗೋಡೆ ಕಟ್ಟಿ ಲೋಕಾರ್ಪಣೆ

ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪ್ರಥಮ ಪುಣ್ಯತಿಥಿ ದಿನವಾದ ಇಂದು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶ್ರೀಗಳ ಶಿಲಾ ವೃಂದಾವನ ಪ್ರತಿಷ್ಠಾ ಪೂರ್ವಕ ಆರಾಧನೋತ್ಸವ ನಡೆದರೆ, ಉಡುಪಿ ಸಹಿತ ದೇಶದ ವಿವಿಧೆಡೆ ಇರುವ ಪೇಜಾವರ ಮಠದ ಶಾಖೆಗಳಲ್ಲೂ ಶ್ರೀಗಳ ಸಂಸ್ಮರಣೋತ್ಸವವು ನಡೆಯಿತು.

ಉಡುಪಿಯಲ್ಲಿ ಶ್ರೀಗಳ ಸಂಸ್ಮರಣೆಯ ವಿಶೇಷ ಕಾರ್ಯಕ್ರಮವೊಂದು ನಡೆದಿದೆ ‌ ಸ್ಥಳೀಯ ಮುಚ್ಲುಕೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನ ಕೊಡವೂರು ಶಂಕರನಾರಾಯಣ ದೇವಸ್ಥಾನ, ಪಾಜಕದ ಆನಂದತೀರ್ಥ ವಿದ್ಯಾಲಯಗಳಲ್ಲಿ ಶ್ರೀ ವಿಶ್ವೇಶತೀರ್ಥರು ವಿವಿಧ ಸಂದರ್ಭಗಳಲ್ಲಿ ಭೇಟಿ ನೀಡಿದಾಗ ಸಸಿಗಳನ್ನು ನೆಟ್ಟಿದ್ದು, ಈಗ ಅದು ಸೊಂಪಾಗಿ ಬೆಳೆದು ನಿಂತಿವೆ. ಇವುಗಳಿಗೆ ಸುಂದರವಾಗಿ ಕಟ್ಟೆಗಳನ್ನು ಕಟ್ಟಿ ಪುಷ್ಪಾಲಂಕಾರ ಮಾಡಿ ಲೋಕಾರ್ಪಣೆಗೊಳಿಸಿ ಸಂಸ್ಮರಣೆಯನ್ನು ಮಾಡಲಾಯಿತು.

ಮುಚ್ಲುಕೋಡು ದೇವಳದ ಆವರಣದಲ್ಲಿ ಶ್ರೀಗಳು ತಮ್ಮ 80ನೇ ಜನ್ಮವರ್ಧಂತಿ ಕಾರ್ಯಕ್ರಮದ ಸಂದರ್ಭ 10/12/2010 ರಂದು ಸುಬ್ರಹ್ಮಣ್ಯ ಷಷ್ಟೀ ಪರ್ವದಿನದಂದು ಶ್ರೀ ವಿಶ್ವೇಶತೀರ್ಥ ಮೂಲಿಕಾ ವನ ನಿರ್ಮಾಣಕ್ಕೆ ನಾಗಕೇಸರ ಸಸಿ ನೆಟ್ಟು ಚಾಲನೆ ನೀಡಿದ್ದರು. ಅದು ಈಗ ಸಮೃದ್ಧವಾಗಿ ಬೆಳೆದಿದೆ ಮಾತ್ರವಲ್ಲ, ಅಲ್ಲಿ 80 ವಿವಿಧ ವನಸ್ಪತಿಗಳ ಸುಂದರವಾದ ಪುಟ್ಟ ವನ ಬೆಳೆದು ನಿಂತಿದೆ.

ಪರಿಸರ ಪ್ರಕೃತಿಯ ಬಗ್ಗೆ ಅನನ್ಯ ಪ್ರೀತಿ ಹೊಂದಿದ್ದ ಶ್ರೀಗಳ ಸ್ಮರಣಾರ್ಥ ಈ ಸಸಿಗಳನ್ನು ಚೆನ್ನಾಗಿ ಪೋಷಿಸುವ ಸಂಕಲ್ಪ ಮಾಡಲಾಗಿದೆ. ಈ ಕಟ್ಟೆಗಳ ಮೇಲೆ ಶ್ರೀಗಳ ಹೆಸರು ಮತ್ತು ನೆಟ್ಟ ದಿನಾಂಕವನ್ನು ಶಿಲಾಫಲಕದಲ್ಲಿ ನಮೂದಿಸಲಾಗುತ್ತದೆ ಎಂದು ಸಂಯೋಜಿಸಿದ ವಾಸುದೇವ ಭಟ್ ಪೆರಂಪಳ್ಳಿ ತಿಳಿಸಿದ್ದಾರೆ.

ಈ ಬಗ್ಗೆ ಕರಂಬಳ್ಳಿಯಲ್ಲಿ ಕೆ ರಘುಪತಿ ಭಟ್ ರಮೇಶ ಬಾರಿತ್ತಾಯ ವಾಗೀಶ, ಆನಂದತೀರ್ಥ ವಿದ್ಯಾಲಯದ ರೂಪಾ ಬಲ್ಲಾಳ್, ಗೀತಾ ಶಶಿಧರ್ , ಮುಚ್ಲುಕೋಡಿನಲ್ಲಿ ರಾಮಕೃಷ್ಣ ತಂತ್ರಿ ರಾಜಶೇಖರ ಹೆಬ್ಬಾರ್, ಕೊಡವೂರು ದೇವಳದ ಆಡಳಿತ ಮಂಡಳಿ ಜನಾರ್ದನ ಕೊಡವೂರು ವಿಶೇಷ ಸಹಕಾರ ನೀಡಿದ್ದಾರೆ .