ಇಡೀ ವಿಶ್ವವನ್ನೇ ತನ್ನ ಕೈಚಳಕದ ಮೂಲಕ ನಿರ್ಮಾಣ ಮಾಡಿದ ವಾಸ್ತುಶಿಲ್ಪಿ ವಿಶ್ವಕರ್ಮರು : ಶಾಸಕ ಯಶ್‌ಪಾಲ್ ಎ ಸುವರ್ಣ

ಉಡುಪಿ ಸೆಪ್ಟಂಬರ್ 17 (ಕ.ವಾ): ಭಾರತೀಯ ಸಂಸ್ಕೃತಿ, ಪುರಾಣ, ಧಾರ್ಮಿಕ ಪರಂಪರೆ ಹಾಗೂ ಶಿಲ್ಪಕಲೆಯ ಇತಿಹಾಸದ ಬಗ್ಗೆ ಅವಲೋಕಿಸಿದಾಗ ‘ವಿಶ್ವಕರ್ಮ’ ಎಂಬ ಹೆಸರು ಅತ್ಯಂತ ಮಹತ್ವಪೂರ್ಣವಾಗಿ ಕಾಣಿಸುತ್ತದೆ. ತಂತ್ರಜ್ಞಾನದ ಪರಿವೇ ಇಲ್ಲದ ಸಾವಿರಾರು ವರ್ಷಗಳ ಹಿಂದೆ ತನ್ನ ಕೈಚಳಕದಿಂದ ಇಡೀ ವಿಶ್ವವನ್ನೇ ನಿರ್ಮಾಣ ಮಾಡುವ ಮೂಲಕ ದೇವಶಿಲ್ಪಿ ಹಾಗೂ ವಿಶ್ವದ ಸೃಷ್ಟಿಕರ್ತನೆಂದು ವಿಶ್ವಕರ್ಮರು ಗುರುತಿಸಿಕೊಂಡಿದ್ದಾರೆ ಎಂದು ಶಾಸಕ ಯಶ್‌ಪಾಲ್ ಎ ಸುವರ್ಣ ಹೇಳಿದರು.
ಅವರು ಇಂದು ನಗರದ ಕುಂಜಿಬೆಟ್ಟು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು.
ಸರಕಾರವು ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗಾಗಿ ಪಿ.ಎಂ ವಿಶ್ವಕರ್ಮ ಯೋಜನೆಯನ್ನು ಅನುಷ್ಠಾನಗೊಳಿಸಿ, ಆ ಮೂಲಕ ಸಮುದಾಯದವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ದೇಶದ ಪಾರಂಪರಿಕ ಕುಲ ಕಸುಬುಗಳಿಗೆ ಬಲ ತುಂಬುವಲ್ಲಿ ಈ ಯೋಜನೆ ಸಹಕಾರಿಯಾಗಿದ್ದು, ಯೋಜನೆಗಳ ಲಾಭ ಪಡೆದುಕೊಳ್ಳುವುದರ ಮೂಲಕ ಸಮುದಾಯದ ಬಹಳಷ್ಟು ಜನರು ಬದುಕು ಕಟ್ಟಿಕೊಂಡಿದ್ದಾರೆ ಎಂದ ಅವರು, ಜಿಲ್ಲೆಯಲ್ಲಿಯೂ ಸಹ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ, ಕಾಪು ಮಾರಿಗುಡಿ, ಪಡುಬಿದ್ರಿ, ಕಡಿಯಾಳಿ ಸೇರಿದಂತೆ ವಿವಿಧ ದೇವಾಲಯಗಳಿಗೆ ಹೊಸ ರೂಪ ಕೊಡುವ
ಕೆಲಸ ವಿಶ್ವಕರ್ಮರಿಂದ ಆಗಿದೆ ಎಂದರು.
ವಿಶ್ವಕರ್ಮ ಜಯಂತಿಯನ್ನು ಆಚರಿಸುವ ಮೂಲಕ ವಿಶ್ವಕರ್ಮರು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸುವ ಕೆಲಸ ಮಾಡಲಾಗುತ್ತಿದ್ದು, ಅವರನ್ನು ಮಾದರಿಯಾಗಿ ಸಮುದಾಯ ಬಾಂಧವರು ಸ್ವೀಕಾರ ಮಾಡಬೇಕು. ಮುಂದಿನ ಪೀಳಿಗೆಗೆ ಅವರ ಪರಂಪರಾಗತ ಜ್ಞಾನವನ್ನು ಪಸರಿಸುವ ದೃಷ್ಠಿಯಿಂದ ಸರಕಾರ ಪ್ರತೀ ವರ್ಷ ಸೆ. 17 ರಂದು ವಿಶ್ವಕರ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಸಮುದಾಯದಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಗೌರವಿಸುತ್ತಾ ಬರಲಾಗುತ್ತಿದೆ ಎಂದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಮಾತನಾಡಿ, ಪ್ರಪಂಚ ನಿರ್ಮಾಣದಲ್ಲಿ ಶಿಲ್ಪಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ವೇದ-ಉಪನಿಷತ್ತುಗಳಲ್ಲಿರುವ ವಿಚಾರಧಾರೆಗಳನ್ನು ಅಳವಡಿಸಿಕೊಂಡಾಗ ದೇವರು ಯಾವ ಉದ್ದೇಶಕ್ಕಾಗಿ ಮನುಕುಲವನ್ನು ಸೃಷ್ಠಿಸಿದ್ದಾನೆಂದು ಅರಿವಿಗೆ ಬರುತ್ತದೆ. ಆಧುನಿಕ ಯುಗದಲ್ಲಿ ತಾಂತ್ರಿಕತೆ ಎಷ್ಟೇ ಮುಂದುವರೆದಿದ್ದರೂ ಸಹ ಯಾವುದೇ ವಿಜ್ಞಾನ, ತಂತ್ರಜ್ಞಾನದ ಅರಿವಿಲ್ಲದೇ ಅನಾದಿ ಕಾಲದಲ್ಲಿಯೂ ಸಹ ದೇವರು ನೀಡಿದ ವರದ ಮೂಲಕ ವಾಸ್ತು ಶಿಲ್ಪ ರಚಿಸುವ ಕುಶಲತೆಯನ್ನು ವಿಶ್ವಕರ್ಮ ಸಮುದಾಯದವರು
ಮೈಗೂಡಿಸಿಕೊಂಡಿದ್ದಾರೆ ಎಂದರು.
ವಿಶ್ವಕರ್ಮ ಸಮುದಾಯದವರು ಯಾವುದೇ ಜಾತಿ, ಮತ ಧರ್ಮ ಬೇಧವಿಲ್ಲದೇ ಕ್ರಿಯಾಶೀಲತೆಯಿಂದ ಮಠ, ಮಂದಿರ, ದೇವಸ್ಥಾನ, ಚರ್ಚ್, ಮಸೀದಿಗಳನ್ನು ವಾಸ್ತುಶಿಲ್ಪದಂತೆ ನಿರ್ಮಿಸುತ್ತಿದ್ದಾರೆ. ಯಾವುದೇ ಸಮುದಾಯಗಳು ಸಂಘಟಿತರಾದಾಗ ಮಾತ್ರ ಸಮಾಜದ ಮುನ್ನೆಲೆಗೆ ಬರಲು ಸಾಧ್ಯ ಎಂದ ಅವರು, ಜಿಲ್ಲೆಯ ಅಭಿವೃದ್ಧಿಯಲ್ಲಿ ವಿಶ್ವಕರ್ಮರ ಕೊಡುಗೆ ಕಾಣಬಹುದಾಗಿದೆ ಎಂದರು.
ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ಯುಗ ಯುಗಗಳಿಂದಲೂ ಪ್ರಪಂಚ ಉದ್ಭವವಾದಾಗಿನಿಂದಲೂ ವಿಶ್ವಕರ್ಮರ ಸೇವೆ ಸಮಾಜಕ್ಕೆ ಇದೆ. ಜಿಲ್ಲೆಯಲ್ಲಿ ವಿಶ್ವಕರ್ಮರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಸಾಧನೆ ಮಾಡುತ್ತಿರುವ ವಿಶ್ವಕರ್ಮರು ಇದನ್ನು ಮುಂದುವರೆಸಿಕೊoಡು ಹೋಗಬೇಕು ಎಂದರು.
ಪಡುಕುತ್ಯಾರು ಆನೆಗುಂದಿ ಮಠದ ಲೋಲಾಕ್ಷ ಶರ್ಮ ವಿಶ್ವಕರ್ಮರ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಾ, ವಿಶ್ವಕರ್ಮ ಸಮುದಾಯದ ಆರಾಧ್ಯ ಧೈವ ದೇವಶಿಲ್ಪಿ ವಿಶ್ವಕರ್ಮರು. ಪ್ರಪಂಚದ ಸೃಷ್ಠಿ ಹೇಗಾಯಿತು ಎಂದು ಅರಿಯಲು ವಿಶ್ವಕರ್ಮರನ್ನು ಅಧ್ಯಯನ ಮಾಡಿದಾಗ ನಮಗೆ ತಿಳಿಯುತ್ತದೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ ಎಂದ ಅವರು, ಯಾವುದೇ ಜನಾಂಗದವರ ಮನೆ, ಕೃಷಿಗೆ ಸಂಬoಧಿತ ವಸ್ತುಗಳ ಕೆಲಸಗಳನ್ನು ಸಮುದಾಯದವರು ಮಾಡಿಕೊಡುತ್ತಿದ್ದಾರೆ. ವಿಶ್ವಕರ್ಮ ಸಮುದಾಯದ ಮಕ್ಕಳು ಆಧುನಿಕತೆಯ ತಂತ್ರಜ್ಞಾನ ಬಳಸಿಕೊಂಡು ವೃತ್ತಿಯನ್ನು ಮುಂದುವರೆಸಿಕೊoಡು ಹೋಗಬೇಕು ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವೃತ್ತಿ ಸಾಧನೆಗೈದ ವಿಶ್ವಕರ್ಮ ಸಮಾಜದ ಐದು ಮಂದಿ ಹಿರಿಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜ ಬಾಂಧವರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಇಲಾಖೆಯ ಸಿಬ್ಬಂದಿ ವರ್ಷಾ ಬಿ ಕೋಟ್ಯಾನ್ ನಿರೂಪಿಸಿ, ವಂದಿಸಿದರು.

ಮಾನ್ಯ ಮುಖ್ಯಮಂತ್ರಿಗಳ ಪ್ರವಾಸ ಕಾರ್ಯಕ್ರಮ ಉಡುಪಿ ಸೆಪ್ಟಂಬರ್ 17 (ಕ.ವಾ): ಕರ್ನಾಟಕ ಸರಕಾರದ ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ಸೆಪ್ಟಂಬರ್ 18 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಅಂದು ಮಧ್ಯಾಹ್ನ 3 ಗಂಟೆಗೆ ಹೆಬ್ರಿ ಹೆಲಿಪ್ಯಾಡ್‌ಗೆ ಆಗಮಿಸುವ ಅವರು ನಂತರ ಹೆಬ್ರಿಯಲ್ಲಿ ಕಸ್ತೂರಿರಂಗನ್ ವರದಿಗೆ ಸಂಬoಧಪಟ್ಟoತೆ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಆ ಬಳಿಕ ಹೆಲಿಕಾಪ್ಟರ್ ಮೂಲಕ ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಕಾರ್ಯಕ್ರಮ ಉಡುಪಿ ಸೆಪ್ಟಂಬರ್ 17 (ಕ.ವಾ): ರಾಜ್ಯದ ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ರಿಜ್ವಾನ್ ಅರ್ಷದ್ ಅವರು ಸೆಪ್ಟಂಬರ್ 18 ಮತ್ತು 19 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಸೆ. 18 ರಂದು ಮಧ್ಯಾಹ್ನ 3 ಗಂಟೆಗೆ ಹೆಬ್ರಿ ಹೆಲಿಪ್ಯಾಡ್‌ಗೆ ಆಗಮಿಸುವ ಅವರು ನಂತರ ಹೆಬ್ರಿಯಲ್ಲಿ ಕಸ್ತೂರಿರಂಗನ್ ವರದಿಗೆ ಸಂಬoಧಪಟ್ಟoತೆ ಏರ್ಪಡಿಸಲಾಗಿರುವ ಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳೊoದಿಗೆ ಭಾಗವಹಿಸಿ, ನಂತರ ಮಂಗಳೂರಿಗೆ ಹೆಲಿಕಾಪ್ಟರ್ ಮೂಲಕ ತೆರಳಲಿದ್ದಾರೆ.
ಸೆ. 19 ರಂದು ಬೆಳಗ್ಗೆ 9.30 ಕ್ಕೆ ಕಾಪುವಿಗೆ ಆಗಮಿಸುವ ಸಚಿವರು ಬೆಳಿಗ್ಗೆ 10 ಗಂಟೆಗೆ ಕಾಪು ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಭಾಗವಹಿಸಿ, ನಂತರ ಮಂಗಳೂರಿಗೆ ತೆರಳಲಿದ್ದಾರೆ.

ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಇಲಾಖೆ ಸಚಿವರ ಪ್ರವಾಸ ಕಾರ್ಯಕ್ರಮ

ಉಡುಪಿ ಸೆಪ್ಟಂಬರ್ 17 (ಕ.ವಾ): ರಾಜ್ಯದ ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಇಲಾಖೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಸೆಪ್ಟಂಬರ್ 18 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಅಂದು ಮಧ್ಯಾಹ್ನ 3 ಗಂಟೆಗೆ ಹೆಬ್ರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದ ಹೆಲಿಪ್ಯಾಡ್‌ಗೆ ಆಗಮಿಸಿ, ನಂತರ ಹೆಬ್ರಿಯ ಸರ್ಕಾರಿ ಪಿ.ಯು ಕಾಲೇಜಿನ ಆವರಣದಲ್ಲಿ ನಡೆಯಲಿರುವ ಕಸ್ತೂರಿರಂಗನ್ ವರದಿಗೆ ಸಂಬoಧಪಟ್ಟoತೆ ಏರ್ಪಡಿಸಲಾಗಿರುವ ಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳೊoದಿಗೆ ಭಾಗವಹಿಸಿ, ನಂತರ ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಜಲಸಂಪನ್ಮೂಲ ಇಲಾಖೆ ಸಚಿವರ ಪ್ರವಾಸ ಕಾರ್ಯಕ್ರಮ

ಉಡುಪಿ ಸೆಪ್ಟಂಬರ್ 17 (ಕ.ವಾ): ರಾಜ್ಯ ಸರ್ಕಾರದ ಜಲ ಸಂಪನ್ಮೂಲ ಇಲಾಖೆ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಸೆಪ್ಟಂಬರ್ 18 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಅಂದು ಬೆಳಗ್ಗೆ 7.45 ಕ್ಕೆ ಕಾರ್ಕಳಕ್ಕೆ ಆಗಮಿಸಿ, ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆ ಪ್ರಯುಕ್ತ ಮಾರ್ಗ ಬದಲಾವಣೆ

ಉಡುಪಿ ಸೆಪ್ಟಂಬರ್ 17 (ಕ.ವಾ): ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ಎದುರು ಸಾರ್ವಜನಿಕ ಗಣೇಶೋತ್ಸವ ಸೆ. 14 ರಿಂದ 18 ರವರೆಗೆ ನಡೆಯಲಿದ್ದು, ಸೆ. 18 ರಂದು ಸದ್ರಿ ಗಣೇಶಮೂರ್ತಿಯ ವಿಸರ್ಜನೆಯು ನಡೆಯಲಿರುತ್ತದೆ. ಮೆರವಣಿಗೆಯು 169 ಎ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಬರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಸದ್ರಿ ಸಂಚಾರ ಅಡಚಣೆ ನಿಯಂತ್ರಣ ಉದ್ದೇಶದಿಂದ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆಯ ಪ್ರಯುಕ್ತ ರಾಷ್ಟ್ರೀಯ ಹೆದ್ದಾರಿ 169
(ಎ) ರ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ಸೆ. 18 ರ ಸಂಜೆ 4 ಗಂಟೆಯಿAದ ರಾತ್ರಿ 10 ಗಂಟೆಯವರೆಗೆ ವಾಹನಗಳಿಗೆ ಈ ಕೆಳಗಿನಂತೆ ಬದಲಿ ಮಾರ್ಗದಲ್ಲಿ ಸಂಚರಿಸಲು ಅಧಿಸೂಚನೆ ಹೊರಡಿಸಿ, ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶಿಸಿರುತ್ತಾರೆ.
ರಾಷ್ಟ್ರೀಯ ಹೆದ್ದಾರಿ 169 (ಎ) ರಲ್ಲಿ ಉಡುಪಿಯಿಂದ ಹೆಬ್ರಿ, ಆಗುಂಬೆ ಕಡೆಗೆ ಹೋಗುವ ವಾಹನಗಳು ಹಿರಿಯಡ್ಕ ಜಂಕ್ಷನ್‌ನಲ್ಲಿ ಮಾರ್ಗ ಬದಲಾಯಿಸಿ ಕೋಟ್ನಾಕಟ್ಟೆ-ಹರಿಖಂಡಿಗೆ-ಬೈರAಪಳ್ಳಿ-ಪರ್ಡೂರು ಮೇಲ್ಪೇಟೆ ಮಾರ್ಗವಾಗಿ ಅಥವಾ ಹಿರಿಯಡ್ಕ, ಜಜೆ, ಕುಕ್ಕೆಹಳ್ಳಿ ಪೇತ್ರಿ ಮಾರ್ಗವಾಗಿ ಹೆಬ್ರಿ ಆಗುಂಬೆಗೆ ಸಂಚರಿಸಬಹುದಾಗಿದೆ.
ರಾಷ್ಟ್ರೀಯ ಹೆದ್ದಾರಿ 169 (ಎ) ರಲ್ಲಿ ಆಗುಂಬೆ- ಹೆಬ್ರಿಯಿಂದ ಉಡುಪಿ ಕಡೆಗೆ ಬರುವ ವಾಹನಗಳು ಪೆರ್ಡೂರು ಮೇಲ್ಪೇಟೆ-ಬೈರಂಪಳ್ಳಿ- ಹರಿಖoಡಿಗೆ-ಕೋಟ್ನಾಕಟ್ಟೆ-ಹಿರಿಯಡ್ಕ ಜಂಕ್ಷನ್ ಮಾರ್ಗವಾಗಿ ಉಡುಪಿಗೆ ಸಂಚರಿಸಬೇಕು.
ರಾಷ್ಟ್ರೀಯ ಹೆದ್ದಾರಿ 169 (ಎ) ರಲ್ಲಿ ಹೆಬ್ರಿಯಿಂದ ಪೆರ್ಡೂರು ಮಾರ್ಗವಾಗಿ ಪೇತ್ರಿ-ಬ್ರಹ್ಮಾವರ ಕಡೆಯ ವಾಹನಗಳಿಗೆ ಪೆರ್ಡೂರು ಮೇಲ್ಪೇಟೆಯ ಆರ್.ಎಸ್.ಎಸ್ ಬ್ಯಾಂಕ್ ಬಳಿ ಇರುವ ಅಲಂಗಾರು ರಸ್ತೆಯ ಮಾರ್ಗವಾಗಿ ಕರ್ಜೆ, ಪೇತ್ರಿ, ಬ್ರಹ್ಮಾವರ ಕಡೆ ಸಂಚರಿಸಬೇಕು.
ಸೆ. 18 ರ ಸಂಜೆ 4 ಗಂಟೆಯಿoದ ರಾತ್ರಿ 10 ಗಂಟೆಯವರೆಗೆ ಪೆರ್ಡೂರು ಕೆಳಪೇಟೆಯಿಂದ-ಮೇಲ್ಪೇಟೆಯ ಬಸ್ ನಿಲ್ದಾಣದವರೆಗೆ ವಾಹನ ಸಂಚಾರ ಮುಕ್ತಗೊಳಿಸಿದೆ.
ಈ ಅಧಿಸೂಚನೆಯನ್ನು ಮೋಟಾರು ವಾಹನ ಕಾಯ್ದೆ 1988 ರ ನಿಯಮ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮ 1989 ರ ನಿಯಮ 221, 5(ಎ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಸೆ. 19 ರಂದು ತಾಲೂಕು ಹಾಗೂ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಸಭೆ

ಭತ್ತದ ಬೆಳೆ ಸ್ಪರ್ಧೆ : ಅರ್ಜಿ ಆಹ್ವಾನ ಇಂಡಿಯಾ ಸ್ಕಿಲ್ಸ್ ಕಾಂಪಿಟೇಷನ್ ಕರ್ನಾಟಕ – 2026 : ನೋಂದಣಿ ಅವಧಿ ವಿಸ್ತರಣೆ ಉಡುಪಿ ಸೆಪ್ಟಂಬರ್ 17 (ಕ.ವಾ): ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ 2028 ನೇ ಸಾಲಿನಲ್ಲಿ ಜಪಾನ್‌ನ ಐಚಿ ನಗರದಲ್ಲಿ ನಡೆಯುವ ವಿಶ್ವ ಕೌಶಲ್ಯ ಸ್ಪರ್ಧೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕೌಶಲ್ಯ ಒಲಿಂಪಿಕ್ಸ್ (ಇಂಡಿಯಾ ಸ್ಕಿಲ್ಸ್ ಕಾಂಪಿಟೇಷನ್ ಕರ್ನಾಟಕ-2026) ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
63 ವಿವಿಧ ವೃತ್ತಿಪರ ಕೌಶಲ್ಯ ವಿಭಾಗಗಳಲ್ಲಿ ನೈಪುಣ್ಯತೆ ಹೊಂದಿರುವ 16 ರಿಂದ 25 ವರ್ಷ ವಯೋಮಿತಿಯ ಯುವಜನರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಅತ್ಯುತ್ತಮ ಪ್ರದರ್ಶನ ನೀಡುವ ಅಭ್ಯರ್ಥಿಗಳಿಗೆ ನಗದು ಬಹುಮಾನಗಳು ಹಾಗೂ ಉಚಿತವಾಗಿ ಉನ್ನತ ಮಟ್ಟದ ಸುಧಾರಿತ ತರಬೇತಿಯನ್ನು ನೀಡಲಾಗುತ್ತದೆ.
ರಾಜ್ಯ ಮಟ್ಟದಲ್ಲಿ ವಿಜೇತರಾದವರು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಆಯೋಜಿಸುವ ಪ್ರಾದೇಶಿಕ ಹಾಗೂ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗುತ್ತಾರೆ. ಅಲ್ಲಿ ಗೆದ್ದು ಅಂತಿಮವಾಗಿ ಜಾಗತಿಕ ಮಟ್ಟದಲ್ಲಿ ‘ಟೀಮ್ ಇಂಡಿಯಾ’ ಪ್ರತಿನಿಧಿಸುವ ಸುವರ್ಣಾವಕಾಶ ಪಡೆಯುತ್ತಾರೆ.
ಆಸಕ್ತ ಅರ್ಹ ಅಭ್ಯರ್ಥಿಗಳು ವೆಬ್‌ಸೈಟ್ ನಲ್ಲಿ ಉಚಿತವಾಗಿ ನೋಂದಾವಣೆ ಮಾಡಬಹುದಾಗಿದ್ದು, ಸ್ಪರ್ಧೆಗೆ ನೋಂದಾವಣಿ ಮಾಡಿಕೊಳ್ಳುವ ಅವಧಿಯನ್ನು ಸೆ. 22 ರ ವರೆಗೆ ವಿಸ್ತರಿಸಲಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9606492216 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.