ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ವಿಶ್ವಕರ್ಮ ಸಮಾಜ ಅತ್ಯಂತ ಬೆಳವಣಿಗೆ ಕಾಣುತ್ತಿರುವ ಸಮಾಜವಾಗಿದ್ದು, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸಹಿತ ಅನೇಕ ಕ್ಷೇತ್ರಗಳಲ್ಲಿ ತನ್ನದೇ ರೀತಿಯಲ್ಲಿ ಶಕ್ತಿ ಮೀರಿ ಶ್ರಮಿಸುತ್ತಿದೆ. ಇಂತಹ ಸಂದರ್ಭದಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರದಿಂದ ನೇಮಕಗೊಂಡ ವಿಶ್ವಕರ್ಮ ನಿಗಮದ ಅಧ್ಯಕ್ಷ ಶ್ರೀ ಬಾಬು ಪತ್ತರ್ ಮತ್ತು ಸಮುದಾಯದ ಹಿರಿಯ ಸ್ವಾಮೀಜಿಯವರಾದ ಹಾಸನ ಜಿಲ್ಲೆಯ ಹರೆ ಮಾದನ ಹಳ್ಳಿ ಶ್ರೀ ಶ್ರೀ ಶ್ರೀ ಶಿವ ಸುಜ್ಞಾನ ತೀರ್ಥ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರನ್ನು ವಿಧಾನಸೌಧದಲ್ಲಿ ಖುದ್ದು ಭೇಟಿಯಾಗಿ ಸಮಾಜದ ಅಭಿವೃದ್ಧಿಯ ಬಗ್ಗೆ ಮನವಿಯೊಂದನ್ನು ಸಲ್ಲಿಸಿದ್ದರು.
ವಾಸ್ತವವಾಗಿ ಈ ಸಭೆಯನ್ನು ಕರೆದಿದ್ದು ಸಚಿವರಾಗಲಿ, ಅನ್ಯರಾಗಲಿ ಅಲ್ಲ. ಬದಲಾಗಿ ಸಮಾಜದ ಹಿರಿಯ ಸ್ವಾಮೀಜಿಯವರ ನೇತೃತ್ವದಲ್ಲಿ ಸರ್ಕಾರಕ್ಕೆ ಸಚಿವರ ಮೂಲಕ ಮನವಿ ಕೊಡಲಾಗಿತ್ತು. ಇದನ್ನು ಸ್ವಾಗತಿಸುವ ಬದಲು ಎಮ್.ಎಲ್.ಸಿ. ನಂಜುಂಡಿಯವರ ಬೆಂಬಲಿಗರು ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರಿಂದ ವಿಶ್ವಕರ್ಮ ಸಮಾಜ ಒಡೆಯಲು ಸಂಚು ಎಂಬ ಹೇಳಿಕೆಗಳೂ ಸೇರಿದಂತೆ ಅನೇಕ ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡುತ್ತಿರುವುದು ಕಂಡುಬಂದಿದೆ.
ಈ ಚರ್ಚೆ ಮತ್ತು ವಿವಾದಗಳನ್ನು ಕೆ.ಪಿ.ನಂಜುಂಡಿಯವರ ಹೆಸರಿನಲ್ಲಿ ನಡೆಸುತ್ತಿರುವುದರಿಂದ ಶಾಸಕ ನಂಜುಂಡಿಯವರನ್ನು ಕರೆದು ಬುದ್ಧಿ ಹೇಳಬೇಕು. ಸಮಾಜ ಒಡೆಯುತ್ತಿರುವ ಕೆಲಸವನ್ನು ಬೇರಾರೂ ಮಾಡುತ್ತಿಲ್ಲ, ಸ್ವತಃ ನಂಜುಂಡಿಯವರೇ ಮಾಡುತ್ತಿದ್ದಾರೆ ಎಂದು ಮಂಗಳೂರಿನಲ್ಲಿ ವಿಶ್ವಕರ್ಮ ಮುಖಂಡರ ನಿಯೋಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
ಒಂದು ಸಮಾಜ ಒಂದಾಗಿ ಮುಂದಡಿಯಿಡಬೇಕಾಗಿದ್ದು, ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯಬೇಕಾದ ದಿನಗಳಲ್ಲಿ ನಂಜುಂಡಿ ಬೆಂಬಲಿಗರು ಎನ್ನುವ ಕೆಲವರು ಮಾಡುವ ಅನಾಹುತಗಳಿಂದಾಗಿ ಸಮಾಜದ ಬಗ್ಗೆ ಕೆಟ್ಟ ಸಂದೇಶ ರವಾನೆ ಆಗುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಸರ್ಕಾರದ ಮಾರ್ಗದರ್ಶಕರಾದವರು ಪಕ್ಷದ ಶಾಸಕರಿಗೆ ಈ ಕುರಿತು ಮಾರ್ಗದರ್ಶನ ನೀಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಶ್ರೀ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾದ ನಿಯೋಗದಲ್ಲಿ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಶ್ರೀ ಮಧು ಆಚಾರ್ಯ ಮುಲ್ಕಿ, ಶ್ರೀಮದ್ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಶ್ರೀಧರ ಆಚಾರ್ಯ, ವಿಶ್ವಕರ್ಮ ಒಕ್ಕೂಟದ ಮಾಜಿ ಅಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ, ಕಾಳಿಕಾಂಬ ದೇವಸ್ಥಾನದ ಕೇಶವಾಚಾರ್ಯ ಮಂಗಳೂರು, ಕಳಿ ಚಂದ್ರಯ್ಯ ಆಚಾರ್ಯ ಉಪ್ರಳ್ಳಿ, ತ್ರಾಸಿ ಸುಧಾಕರ್ ಆಚಾರ್ಯ, ವಸಂತ ಆಚಾರ್ಯ ಸುರತ್ಕಲ್ ಉಪಸ್ಥಿತರಿದ್ದರು.