ಕಲೆ ಮತ್ತು ವಾಸ್ತು ಶಿಲ್ಪಕ್ಕೆ ವಿಶ್ವಕರ್ಮರು ಮೂಲಪುರುಷರು: ರಘುಪತಿ ಭಟ್

ಉಡುಪಿ: ವಿಶ್ವಕರ್ಮರು ಪ್ರಾತಃಸ್ಮರಣೀಯರಾಗಿದ್ದು, ಅವರಿಂದಾಗಿ ವಿಶ್ವದಲ್ಲಿ ಕಲೆ ಮತ್ತು ವಾಸ್ತುಶಿಲ್ಪ ಆರಂಭಗೊಂಡಿದೆ. ಪುರಾಣಗಳಲ್ಲಿ ಉಲ್ಲೇಖಿಸಿದಂತೆ ಪ್ರಸಿದ್ಧ ಕ್ಷೇತ್ರಗಳು, ವಾಸ್ತುಶಿಲ್ಪ ಕಲೆಗಳು, ವಿಶ್ವಕರ್ಮರಿಂದ ರಚಿತವಾಗಿದ್ದು, ಸುಪ್ರಸಿದ್ಧ ದ್ವಾರಕ ನಗರವು ಇವರ ಸೃಷ್ಟಿಗಳಲ್ಲೊಂದಾಗಿದ್ದು, ಕಲೆ ಮತ್ತು ವಾಸ್ತು ಶಿಲ್ಪಕ್ಕೆ ಇವರೇ ಮೂಲ ಪುರುಷರು ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಹೇಳಿದರು.

ಅವರು ಶನಿವಾರದಂದು ನಗರದ ಕುಂಜಿಬೆಟ್ಟು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಶ್ವಕರ್ಮ ಸಮಾಜ ಬಾಂಧವರು ಕಲೆಗೆ ಹೆಸರುವಾಸಿಯಾಗಿದ್ದು, ಅವರ ಕೆಲಸದ ನೈಪುಣ್ಯತೆಯಿಂದ ರೂಪುಗೊಂಡ ಅತ್ಯುತ್ತಮ ಶಿಲ್ಪಕಲೆಗಳು ದೇಶದ ಆಸ್ತಿಯಾಗಿದೆ. ಜಿಲ್ಲೆಯಲ್ಲಿಯೂ ಕೂಡ ಅನೇಕ ತರಹದ ನವನವೀನ ವಿನ್ಯಾಸದ ಕಲ್ಲು ಕೆತ್ತನೆ ಹಾಗೂ ಮರದ ಕೆತ್ತನೆಯ ವಾಸ್ತು ಶಿಲ್ಪಗಳನ್ನು ಕೊಡುಗೆಯನ್ನಾಗಿ ನೀಡಿದ್ದಾರೆ ಎಂದರು.

ಕುತ್ಯಾರು ಆನೆಗುಂದಿ ಮಠದ ಮೌನೇಶ್ ಶರ್ಮ ವಿಶ್ವಕರ್ಮರ ಕುರಿತು ಉಪನ್ಯಾಸ ನೀಡಿದರು.

ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಕೆ ಉದಯ್ ಕುಮಾರ್ ಶೆಟ್ಟಿ, ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ರತ್ನಾಕರ ಆಚಾರ್ಯ ಉದ್ಯಾವರ, ಉಡುಪಿ ಮತ್ತು ದ.ಕನ್ನಡ ಜಿಲ್ಲೆಗಳ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ರಾಜ್ಯ ಅಖಿಲ ಭಾರತ ವಿಶ್ವಕರ್ಮ ಮಹಾ ಸಭಾಧ್ಯಕ್ಷ ನೆರಂಬಳ್ಳಿ ರಮೇಶ್ ಆಚಾರ್ಯ, ವಿಶ್ವ ಕರ್ಮ ಸಮಾಜ ಬಾಂಧವರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಹರೀಶ್ ಉಪ್ಪೂರು ನಿರೂಪಿಸಿದರು.