ಕೆರಿಬಿಯನ್ ಬೌಲಿಂಗ್ ದಾಳಿಗೆ ನಲುಗಿದ ಪಾಕ್, ವಿಶ್ವಕಪ್ ನಲ್ಲಿ 2ನೇ ಬಾರಿ ಅತೀ‌ ಕಡಿಮೆ ರನ್ ಗೆ ಆಲ್ ಔಟ್

ನಾಟಿಂಗ್‍ಹ್ಯಾಮ್: ವಿಶ್ವಕಪ್ ಸರಣಿಗೂ‌ ಮುನ್ನ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಹೀನಾಯವಾಗಿ ಸೋತಿದ್ದ ಪಾಕ್ ತಂಡ ಇದೀಗ ವಿಶ್ವಕಪ್‍ನಲ್ಲೂ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿದೆ.
ವಿಶ್ವಕಪ್ ನ ಎರಡನೇ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಕೇವಲ‌ 105 ರನ್ ಗಳಿಗೆ ಸರ್ವಪತನ‌ ಕಂಡಿದೆ.‌ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್, ಕೆರಿಬಿಯನ್ ಬೌಲಿಂಗ್ ದಾಳಿಗೆ ಒಳಗಾಗಿ 21.4 ಓವರ್ಗೆ ಆಲ್ ಔಟ್ ಆಗಿದ್ದು, ವಿಶ್ವಕಪ್ನಲ್ಲಿ ಮತ್ತೊಮ್ಮೆ ಅತೀ ಕಡಿಮೆ ರನ್ ಗೆ ಸರ್ವಪತನ‌ ಕಂಡಂತಾಗಿದೆ. 1992 ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 74 ರನ್ ಗಳಿಗೆ ಅಲೌಟ್ ಆಗಿರುವುದು ಪಾಕ್ ಕನಿಷ್ಠ ರನ್ ಮೊತ್ತವಾಗಿದೆ.
ಪಾಕ್ ಪರ ಆರಂಭಿಕ ಫಖರ್ ಜಮನ್ ಮತ್ತು ಬಾಬರ್ ಅಜಮ್ ತಲಾ 22 ರನ್ ಗಳಿಸಿದ್ದು ಹೊರತುಪಡಿಸಿದರೆ ಸರ್ಫರಾಜ್ ಮತ್ತು ಮೊಹಮ್ಮದ್ ಹಫೀಜ್ ತಂಡಕ್ಕೆ ನೆರವಾಗಲಿಲ್ಲ. ಕೊನೆಯಲ್ಲಿ ರಿಯಾಜ್ 2 ಸಿಕ್ಸರ್ ಸಿಡಿಸಿ 18 ರನ್‍ಗಳಿಸುವ ಮೂಲಕ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.
106 ರನ್ ಗಳ ಅಲ್ಪ ರನ್ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಕೇವಲ 13.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿ ಟೂರ್ನಿಯಲ್ಲಿ ಮೊದಲ ಗೆಲುವು ಪಡೆಯಿತು. ಪಂದ್ಯದಲ್ಲಿ ವಿಂಡೀಸ್ ಪರ 50 ರನ್ (34 ಎಸೆತ, 2 ಬೌಂಡರಿ, 3 ಸಿಕ್ಸರ್) ಸಿಡಿಸಿದ ಕ್ರಿಸ್ ಗೇಲ್ ಅಂತರಾಷ್ಟ್ರಿಯ ಕ್ರಿಕೆಟಿನಲ್ಲಿ 19 ಸಾವಿರ ರನ್ ಪೂರ್ಣಗೊಳಿಸಿದ ಹೆಗ್ಗಳಿಕೆಗೂ ಪಾತ್ರರಾದರು. ಅಲ್ಲದೇ ಪಂದ್ಯದಲ್ಲಿ 3 ಸಿಕ್ಸರ್ ಸಿಡಿಸಿ ವಿಶ್ವಕಪ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿ ಎಂಬ ದಾಖಲೆ ಬರೆದರು.
ಗೇಲ್ ಈ ಪಂದ್ಯ ಸೇರಿ ಒಟ್ಟು 40 ಸಿಕ್ಸರ್ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ 37 ಸಿಕ್ಸರ್ ಗಳಿಸಿದ ಎಬಿಡಿ 2ನೇ ಸ್ಥಾನ, 31 ಸಿಕ್ಸರ್ ಸಿಡಿಸಿರುವ ಪಾಟಿಂಗ್ 3ನೇ ಸ್ಥಾನ ಪಡೆದಿದ್ದಾರೆ.
ವಿಂಡೀಸ್ ಪರ ಬಿಗು ಬೌಲಿಂಗ್ ದಾಳಿ ನಡೆಸಿದ ಒಶಾನೆ ಥಾಮಸ್ 4 ವಿಕೆಟ್ ಪಡೆದು ಮಿಂಚಿದರು. ನಾಯಕ ಹೋಲ್ಡರ್ 3 ವಿಕೆಟ್, ರಸೆಲ್ 2 ಹಾಗೂ ಶೆಲ್ಡನ್ ಕಾಟ್ರೆಲ್ 1 ವಿಕೆಟ್ ಪಡೆದರು.
ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ಅಲ್ಪ ಮೊತ್ತಕ್ಕೆ ಪಾಕ್ ಆಲೌಟ್ ಆಗುತ್ತಿದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‍ಗೆ ಒಳಗಾಗಿದೆ. ಅಲ್ಲದೇ ಪಾಕ್ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.