ವಿಶಾಲ ಗಾಣಿಗ ಕೊಲೆ ಪ್ರಕರಣ: ಪತಿ ಸಹಿತ ಇಬ್ಬರು ಆರೋಪಿಗಳ ಬಂಧನ

ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕುಮ್ರಗೋಡಿನ ಫ್ಲಾಟ್‌ನಲ್ಲಿ ಜುಲೈ 12ರಂದು ನಡೆದ ವಿಶಾಲ ಗಾಣಿಗ(35) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ವಿಶಾಲ ಗಾಣಿಗರ ಪತಿ ಬೀಜೂರು ಚಾರುಕೊಡ್ಲು ನಿವಾಸಿ ರಾಮಕೃಷ್ಣ ಗಾಣಿಗ ಹಾಗೂ ಸುಪಾರಿ ಕಿಲ್ಲರ್ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಕೊಲೆಗೆ ಸುಪಾರಿ ನೀಡಿದ್ದ ಪತಿ:
ವಿಶಾಲ ಗಾಣಿಗ ಹಾಗೂ ಆಕೆಯ ಪತಿ‌ ರಾಮಕೃಷ್ಣ ಮಧ್ಯೆ ವೈಮನಸ್ಸು ಮೂಡಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ತನ್ನ ಪತ್ನಿಯನ್ನು ಕೊಲೆ ಮಾಡುವಂತೆ ರಾಮಕೃಷ್ಣ ಗಾಣಿಗ ಉತ್ತರ ಪ್ರದೇಶದ ಇಬ್ಬರು ಸುಪಾರಿ ಕಿಲ್ಲರ್‌ಗಳಿಗೆ ಸುಪಾರಿ ನೀಡಿದ್ದನು ಎಂಬ ಅಚ್ಚರಿಯ ವಿಷಯ ತನಿಖೆಯಿಂದ ಹೊರಬಿದ್ದಿದೆ.

ಜು.2ರಂದು ತನ್ನ ಮಗ ನೊಂದಿಗೆ ಊರಿಗೆ ಬಂದಿದ್ದ ವಿಶಾಲ ಗಾಣಿಗ ಕುಮ್ರಗೋಡುವಿನ ಫ್ಲಾಟ್‌ನಲ್ಲಿ ವಾಸವಾಗಿದ್ದರು. ಜು.12ರಂದು ವಿಶಾಲ ಗಾಣಿಗ ತನ್ನ ತಂದೆ ತಾಯಿ ಮತ್ತು ಮಗನೊಂದಿಗೆ ರಿಕ್ಷಾದಲ್ಲಿ ಫ್ಲಾಟ್‌ನಿಂದ ತಾಯಿ ಮನೆಯಾದ ಗುಜ್ಜಾಡಿಗೆ ಹೋಗಿದ್ದರು. ಬಳಿಕ‌ ಆಕೆ ಒಬ್ಬಳೇ ಅದೇ ರಿಕ್ಷಾದಲ್ಲಿ ಕುಮ್ರಗೋಡು ಫ್ಲಾಟ್‌ಗೆ ಬಂದಿದ್ದರು. ಆಗ ಇಬ್ಬರು ಸುಪಾರಿ ಕಿಲ್ಲರ್‌ಗಳು ಫ್ಲಾಟ್‌ಗೆ ನುಗ್ಗಿ ಆಕೆಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದರು. ನಂತರ ಪ್ರಕರಣದ ದಿಕ್ಕು ತಪ್ಪಿಸುವ ಉದ್ದೇಶದಿಂದ ಸುಪಾರಿ ಕಿಲ್ಲರ್ ಗಳು ಆಕೆಯ ಮೈಮೇಲಿದ್ದ ಚಿನ್ನಾಭರಣಗಳ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದರು.

ದುಬೈನಲ್ಲೇ ಕೊಲೆಗೆ ಸ್ಕೆಚ್:
ಪತಿ ರಾಮಕೃಷ್ಣ ದುಬೈನಲ್ಲೇ ಕುಳಿತುಕೊಂಡು ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದು, ಅದರಂತೆ ಇಬ್ಬರು ಸುಪಾರಿ ಕಿಲ್ಲರ್ ಗಳಿಗೆ ಡೀಲ್ ಕೊಟ್ಟಿದ್ದನು ಎನ್ನಲಾಗಿದೆ.

ಪತ್ನಿಯ ಸಾವಿನ ಬಳಿಕ‌ ದುಬೈಯಿಂದ ಊರಿಗೆ ಬಂದಿದ್ದ ರಾಮಕೃಷ್ಣನನ್ನು ಪೊಲೀಸರು ಎರಡು ಮೂರು ಬಾರಿ ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ಸಂಶಯದ ಮೇರೆಗೆ ಕೆಲವೊಂದು ಮಾಹಿತಿಗಾಗಿ ಎರಡು ದಿನಗಳ ಹಿಂದೆ ಆತನನ್ನು ಮತ್ತೆ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದರು. ಆಗ ಆತನೇ ಸುಪಾರಿ ನೀಡಿ ಕೊಲೆ ಮಾಡಿಸಿರುವ ಬಗ್ಗೆ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

 

ಇಬ್ಬರು ಸುಪಾರಿ ಕಿಲ್ಲರ್‌ಗಳು ಈ ಕೃತ್ಯ ಎಸಗಿದ್ದು, ಅದರಲ್ಲಿ ಓರ್ವನನ್ನು ಪೊಲೀಸ್ ತಂಡ ಉತ್ತರ ಪ್ರದೇಶದಲ್ಲಿ ಬಂಧಿಸಿ ಉಡುಪಿಗೆ ಕರೆತರುತ್ತಿದೆ. ಇನ್ನೋರ್ವ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿದುಬಂದಿದೆ.
ವಿಶಾಲ ಗಾಣಿಗ ಹಾಗೂ ರಾಮಕೃಷ್ಣ ಗಾಣಿಗ ನಡುವೆ ವೈಮನಸ್ಸು ಮೂಡಿದ್ದು, ಇದೇ ಕೊಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದರೆ ಇದರ ಹಿಂದೆಯೇ ಬೇರೆ ಕಾರಣ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಹೀಗಾಗಿ ಆತನನ್ನು ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.

ನಾಲ್ಕು ದಿನ ಪೊಲೀಸ್ ಕಸ್ಟಡಿಗೆ:
ಬಂಧಿತ ರಾಮಕೃಷ್ಣ ಗಾಣಿಗನನ್ನು ಪೊಲೀಸರು ಇಂದು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ನ್ಯಾಯಾಲಯ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.