ಕಾರ್ಕಳ: ಪರೀಕ್ಷೆ ಎನ್ನುವ ಭಯವನ್ನು ದೂರ ಮಾಡಿಕೊಂಡು ಹಬ್ಬಗಳನ್ನು ಎದುರು ನೋಡುವಂತೆ ಪರೀಕ್ಷೆಗೆ ಕಾತುರದಿಂದ ಕಾಯಬೇಕು. ಪರೀಕ್ಷೆಯೆಂಬ ಒತ್ತಡವನ್ನು ಮೊದಲು ಮನಸ್ಸಿನಿಂದ ತೆಗೆದುಹಾಕಬೇಕು. ಪರೀಕ್ಷಾ ತಯಾರಿಯನ್ನು ಇಷ್ಟಪಟ್ಟು ಮಾಡಬೇಕೇ ಹೊರತು ಅದು ಕಷ್ಟದ ಕೆಲಸ ಎಂಬ ಮನೋಭಾವನೆಯಿಂದ ಮಾಡಬಾರದು ಎಂದು ಖ್ಯಾತ ಮನೋತಜ್ಞರಾದ ಡಾ ವಿರೂಪಾಕ್ಷ ದೇವರಮನೆ ಹೇಳಿದರು.
ಇವರು ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜು ಹಾಗೂ ಕಾರ್ಕಳ ರೋಟರಿ ಕ್ಲಬ್ ಇದರ ಸಹಯೋಗದೊಂದಿಗೆ ಪಿಯು ವಿದ್ಯಾರ್ಥಿಗಳಿಗೆ ನಡೆದ ಹ್ಯಾಪಿ ಎಕ್ಸಾಂ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಓದುವ ರೀತಿ ತಿಳಿದಿರಬೇಕು. ಅರ್ಥ ಮಾಡಿಕೊಂಡು ಅಭ್ಯಾಸ ಮಾಡಿದರೆ ಮಾತ್ರ ಅದು ಪರೀಕ್ಷಾ ಸಮಯಕ್ಕೆ ಉಪಯೋಗಕ್ಕೆ ಬರುತ್ತದೆ. ಪುನರಾವರ್ತಿತ ಅಭ್ಯಾಸ ಮತ್ತು ಸಮಯದ ಸದುಪಯೋಗ ಕಲಿಯುವಿಕೆಯ ಮೇಲೆ ಉತ್ತಮ ಪರಿಣಾಮ ಬೀರಬಲ್ಲದು ಎಂದು ಹೇಳಿದರು. ಏಕಾಗ್ರತೆ, ಪರೀಕ್ಷೆಗಳಲ್ಲಿ ಪ್ರಶ್ನೆಗಳ ಆಯ್ಕೆ ಹಾಗೂ ಉತ್ತರಿಸುವ ರೀತಿಯ ಕುರಿತು ವಿದ್ಯಾರ್ಥಿಗಳಿಗೆ ಸಲಹೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರೋಟರಿ ಕ್ಲಬ್‌ನ ಅಧ್ಯಕ್ಷರೂ ಹಾಗೂ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಜಗದೀಶ್ ಕೆ.ಎ ಮಾತನಾಡಿ, ಇಂದು ಎಲ್ಲಾ ಕ್ಷೇತ್ರಗಳಲ್ಲೂ ಸಾಕಷ್ಟು ಅವಕಾಶಗಳಿವೆ. ಈ ವಿಶಾಲವಾದ ಜಗತ್ತಿನಲ್ಲಿರುವ ವಿಫುಲವಾದ ಅವಕಾಶಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉಜ್ವಲ ಜೀವನವನ್ನು ರೂಪಿಸಿಕೊಳ್ಳಬೇಕು. ಅವಕಾಶಗಳಿಗಾಗಿ ಎಂದೂ ಕಾಯಬಾರದು ಅದನ್ನು ಹುಡುಕಿಕೊಂಡು ಹೋಗಬೇಕು ಎಂದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ ಮಂಜುನಾಥ್ ಎ ಕೋಟ್ಯಾನ್ ಮಾತನಾಡಿ,ಪರೀಕ್ಷೆಯಲ್ಲಿ ಪಡೆಯುವ ಅಂಕಗಳು ಮಾತ್ರ ನಮ್ಮ ಜೀವನವನ್ನು ನಿರ್ಧರಿಸುವ ಮಾನದಂಡವಲ್ಲ ಬದಲಾಗಿ ಜೀವನ ನಿರ್ವಹಣೆಗೆ ಹಲವಾರು ದಾರಿಗಳಿವೆ. ಆದುದರಿಂದ ಕಡಿಮೆ ಅಂಕ ಬಂದ ವಿದ್ಯಾರ್ಥಿಗಳು ಯಾವುದೇ ರೀತಿಯಾಗಿ ನೊಂದಿಕೊಳ್ಳಬಾರದು ಸಕಾರಾತ್ಮಕ ಚಿಂತನೆಯನ್ನು ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್ ಎಸ್.ಸಿ ಸ್ವಾಗತಿಸಿದರು. ರೋಟರಿ ಕ್ಲಬ್ ಸದಸ್ಯ ವಸಂತ ವಂದಿಸಿದರು, ವಿದ್ಯಾರ್ಥಿನಿ ವರ್ಷಾ ಪ್ರಾರ್ಥಿಸಿ, ರಸಾಯನ ಶಾಸ್ತ್ರ ವಿಭಾಗ ಉಪನ್ಯಾಸಕ ಮಹೇಶ್ ಕಾರ್ಯಕ್ರಮ ನಿರೂಪಿಸಿದರು.