ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಗೆ ಭಾಜನವಾಯ್ತು ನಾಗೇಶ್ ಆಚಾರ್ಯ ಕೋಟ ನಿರ್ಮಿಸಿದ ವಿರಾಟ್ ಕೊಹ್ಲಿಯ ವಿಶಿಷ್ಟ ಕಲಾಕೃತಿ

ಉಡುಪಿ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚಿತ್ರಪಾಡಿ ಗ್ರಾಮದ ಕಾರ್ತಟ್ಟು ಸುಬ್ರಾಯ ಆಚಾರ್ ಹಾಗೂ ಸುಶೀಲ ದಂಪತಿಯ ಹಿರಿಯ ಪುತ್ರ ನಾಗೇಶ್ ಆಚಾರ್ಯ ಕೋಟ ಇತ್ತೀಚೆಗೆ ತೆಂಗಿನ ಗರಿಯಲ್ಲಿ ರಚಿಸಿದ ಭಾರತೀಯ ಕ್ರಿಕೆಟ್‌ ತಾರೆ ವಿರಾಟ್ ಕೊಹ್ಲಿಯ ಕಲಾಕೃತಿಯು ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಹಿರಿಮೆಗೆ ಪಾತ್ರವಾಗಿದೆ.

ನಾಗೇಶ್ ಆಚಾರ್ಯ ಸ್ವಂತ ಮರದ ಕೆತ್ತನೆಯ ಶಿಲ್ಪಕಲಾ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ. ತನ್ನ ವೃತ್ತಿ ಬದುಕಿನ ಬಿಡುವಿನ ವೇಳೆಯಲ್ಲಿ ಎಳೆಯ ವಯಸ್ಸಿನಲ್ಲಿ ಆಸಕ್ತಿ ಹೊಂದಿದ್ದ ಚಿತ್ರಕಲೆಯನ್ನೇ ನೆಚ್ಚಿನ ಹವ್ಯಾಸವಾಗಿ ಮುಂದುವರಿಸಿಕೊಂಡು ತನ್ನೊಳಗಿನ ಕಲಾ ಕುಸುಮವು ಹೊಸತನದಿ ಅರಳುವಂತೆ ಪ್ರಯತ್ನಿಸಲು ಆರಂಭಿಸಿದರು.

ಮೊದಮೊದಲು ಪೆನ್ಸಿಲ್ ಆರ್ಟ್ ರಚಿಸುತ್ತಿದ್ದ ಇವರ ಪ್ರತಿಭೆಯು ಮತ್ತಷ್ಟು ಪರಿಪಕ್ವಗೊಳ್ಳುತ್ತ ಪೇಪರ್ ಕಟ್ಟಿಂಗ್ ಆರ್ಟ್, ಲೀಫ್ ಆರ್ಟ್ ಗಳಾಗಿ ಮುಂದುವರಿದು ಸಾಕಷ್ಟು ಯಶಸ್ವಿ ಕಲಾಕೃತಿಗಳು ಇವರ ಕರದಿಂದ ರಚಿತಗೊಂಡಿದೆ. ಅಶ್ವಥ ಎಲೆಯಲ್ಲಿ ಹಲವಾರು ಸಾಧಕರ ಚಿತ್ರವನ್ನು, ದೈವ-ದೇವರುಗಳ ಚಿತ್ರಿಕೆಯನ್ನು ರಚಿಸಿದ್ದಾರೆ. ಬಾಳೆ ಎಲೆಯಲ್ಲಿ ವಿಶೇಷವಾಗಿ ರಚಿತಗೊಂಡ ಗಣಪತಿ ಚಿತ್ರಿಕೆ ಹಾಗೂ ಮೊಳೆ ಹಾಗೂ ದಾರದ ಸಹಾಯದಿಂದ ವಿಶೇಷವಾಗಿ ರಚಿಸಲ್ಪಟ್ಟ ಪುನೀತ್ ರಾಜ್ ಕುಮಾರ್ ಅವರ ಚಿತ್ರಿಕೆ ಜನಮನ್ನಣೆಯನ್ನು ಗಳಿಸಿದೆ. ಇತ್ತೀಚಿಗಷ್ಟೆ ತೆಂಗಿನ ಗರಿಯಲ್ಲಿ ಕೇವಲ 9 ನಿಮಿಷಗಳ ಅವಧಿಯಲ್ಲಿ ರಚಿಸಿದ ಭಾರತೀಯ ಕ್ರಿಕೆಟ್‌ ತಾರೆ ವಿರಾಟ್ ಕೊಹ್ಲಿಯ ಕಲಾಕೃತಿಯನ್ನು ಐ.ಎಸ್.ಒ ದಿಂದ ಪ್ರಮಾಣೀಕೃತಗೊಂಡಿರುವ ಎಲ್ ಬಿ ಎಕ್ಸ್ ಕ್ಲೂಸಿವ್ ಟ್ಯಾಲೆಂಟ್ & ಕ್ರಿಯೇಶನ್ ಕೊ ಎಂಬ ಉತ್ತರ ಪ್ರದೇಶದ ಬರೇಲಿಯ ಸಂಸ್ಥೆಯಿಂದ ಆಯ್ಕೆಗೊಳ್ಳುವ ಪ್ರತಿಷ್ಠಿತ ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಗೆ ಕಳುಹಿಸಲಾಗಿದ್ದು, ಇವರ ಕಲಾಪ್ರತಿಭೆಯ ನೈಪುಣ್ಯತೆಯನ್ನು ಪರಾಮರ್ಶಿಸಿ ಅರ್ಹವಾಗಿ ಇವರಿಂದ ರಚಿತಗೊಂಡ ಕಲಾಕೃತಿಯು ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಪಟ್ಟಿಗೆ ನಾಮಾಂಕಿತಗೊಂಡಿದೆ.