ಅಫ್ಘಾನಿಸ್ತಾನ ಸರಣಿಯಿಂದ ವಿರಾಟ್ ಕೊಹ್ಲಿ ಔಟ್! ಭಾರತಕ್ಕೆ ಭಾರಿ ಆಘಾತ

ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಗಾಯದ ಸಮಸ್ಯೆಯಿಂದಾಗಿ ಇಡೀ ಸರಣಿಯಿಂದ ಹೊರಬಿದ್ದಿದ್ದಾರೆ. ಜೂನ್ 13 ರಿಂದ ಜೂನ್ 20 ರವರೆಗೆ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಬೇಕಾಗಿದ್ದು, ಕೊಹ್ಲಿ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.
ಆರ್‌ಸಿಬಿ ಫೈನಲ್ ಪಂದ್ಯದ ವೇಳೆ ಹ್ಯಾಮ್‌ಸ್ಟ್ರಿಂಗ್ ಗಾಯ!
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ 2026ರ ರೋಚಕ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಗುಜರಾತ್ ಟೈಟನ್ಸ್ ವಿರುದ್ಧ 156 ರನ್‌ಗಳ ಗುರಿಯನ್ನು ಬೆನ್ನಟ್ಟಿ, ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡಿತ್ತು.
ಈ ಐತಿಹಾಸಿಕ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿರಾಟ್ ಕೊಹ್ಲಿ, ಪಂದ್ಯದ ನಡುವೆ ಹ್ಯಾಮ್‌ ಸ್ಟ್ರಿಂಗ್ (ತೊಡೆಯ ಸ್ನಾಯು ಸೆಳೆತ) ಗಾಯಕ್ಕೆ ತುತ್ತಾಗಿದ್ದರು. ಸದ್ಯ ವೈದ್ಯಕೀಯ ತಂಡದ ನಿಗಾದಲ್ಲಿರುವ ಕೊಹ್ಲಿ ಅವರಿಗೆ ಸಂಪೂರ್ಣ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ.