ಜುಲೈ 1 ರಿಂದ 5ರವರೆಗೆ ಬರ್ಮಿಂಗ್ಹ್ಯಾಮ್ನಲ್ಲಿ ಇಂಗ್ಲೆಂಡ್ ವಿರುದ್ಧ ಮರು ನಿಗದಿಪಡಿಸಲಾದ ಟೆಸ್ಟ್ಗೆ ಭಾರತ ಸಿದ್ಧತೆ ಮಾಡುತ್ತಿರುವ ಬೆನ್ನಲ್ಲೆ ಟೀಂ ಇಂಡಿಯಾದ ಹಲವಾರು ಆಟಗಾರರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.
ವೈರಸ್ಗೆ ಪರೀಕ್ಷೆ ಧನಾತ್ಮಕವೆಂದು ಕಂಡು ಬಂದ ನಂತರ ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ತಂಡದೊಂದಿಗೆ ಯುಕೆಗೆ ಪ್ರಯಾಣಿಸಲು ನಿರಾಕರಿಸಿದರೆ, ಕಳೆದ ವಾರ ತಂಡವು ಲಂಡನ್ಗೆ ಆಗಮಿಸಿದ ಬಳಿಕ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
“ಹೌದು, ಮಾಲ್ಡೀವ್ಸ್ ರಜೆಯಿಂದ ಹಿಂತಿರುಗಿದ ನಂತರ ವಿರಾಟ್ ಕೊಹ್ಲಿ ಕೂಡ ಕೋವಿಡ್ನಿಂದ ಪ್ರಭಾವಿತರಾಗಿದ್ದಾರೆ” ಎಂದು ಮೂಲವೊಂದು ಪತ್ರಿಕೆಗೆ ತಿಳಿಸಿದೆ.
“ಇದರರ್ಥ ಜೂನ್ 24 ರಂದು ಲೀಸೆಸ್ಟರ್ಶೈರ್ ವಿರುದ್ಧದ ಭಾರತದ ಪ್ರವಾಸ ಪಂದ್ಯವು ಕೋಚ್ ರಾಹುಲ್ ದ್ರಾವಿಡ್ ನಿರೀಕ್ಷಿಸಿದ ರೀತಿಯಲ್ಲಿರುವುದಿಲ್ಲ, ಏಕೆಂದರೆ ಕೋವಿಡ್ -19 ಗೆ ಒಳಗಾದ ನಂತರ ಆಟಗಾರರನ್ನು ಓವರ್ಲೋಡ್ ಮಾಡುವುದನ್ನು ತಪ್ಪಿಸುವುದು ವೈದ್ಯಕೀಯ ಸಲಹೆಯಾಗಿದೆ. ತಂಡದಲ್ಲಿ ಹೆಚ್ಚಿನ ಕೋವಿಡ್ ಪ್ರಕರಣಗಳು ಇರಬಹುದು” ಎಂದು ಮೂಲವು ಹೇಳಿದೆ.
ಜುಲೈ 1 ರಿಂದ 5 ರವರೆಗೆ ಭಾರತ ತಂಡವು ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಲಿದೆ. ಪಂದ್ಯವನ್ನು ಮರುನಿಗದಿ ಮಾಡಲಾಗಿದೆ. 2021 ರಲ್ಲಿ ಭಾರತ ತಂಡದ ಸಿಬ್ಬಂದಿಗಳಿಗೆ ಕೋವಿಡ್ -19 ಸೋಂಕು ತಗುಲಿದ ಬಳಿಕ ಭಾರತದ ಇಂಗ್ಲೆಂಡ್ ಪ್ರವಾಸದ 5 ನೇ ಟೆಸ್ಟ್ ಅನ್ನು ಮುಂದೂಡಲಾಗಿತ್ತು. ಇದೀಗ ಮತ್ತೆ ಟೀಂ ಇಂಡಿಯಾ ಸದಸ್ಯರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿರುವುದು ತಂಡವನ್ನು ಚಿಂತೆಗೆ ದೂಡಿದೆ. ಸದ್ಯ ಭಾರತ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.