ಉಡುಪಿ: ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆಯ ಕಟ್ಟುನಿಟ್ಟಿನ ಅನುಷ್ಠಾನ ಕುರಿತಂತೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಜಿಲ್ಲೆಯ ಎಲ್ಲಾ ಸ್ಕ್ಯಾನಿಂಗ್ ಸೆಂಟರ್ಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲಿಸುವ ಬಗ್ಗೆ ಶೀಘ್ರದಲ್ಲಿ ಆದೇಶ ಬರುವ ಸಾಧ್ಯತೆಗಳಿದ್ದು, ಕಾಯಿದೆಯ ಅಂಶಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುವವರಿಗೆ ಕಾರಾಗೃಹ ವಾಸ ಮತ್ತು ದಂಡದ ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಹೇಳಿದರು.
ಅವರು ಶುಕ್ರವಾರದಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಶ್ರೀಕೃಷ್ಣ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಕ್ಷಮ ಪ್ರಾಧಿಕಾರ ಪಿ.ಸಿ ಎಂಡ್ ಪಿ.ಎನ್.ಡಿ.ಟಿ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ವೈದ್ಯಕೀಯ ಅಧಿಕಾರಿಗಳಿಗೆ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆ ಕುರಿತು ನಡೆದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಮಾಡುವುದು ಅಪರಾಧವಾಗಿದ್ದು, ಗರ್ಭದಲ್ಲಿನ ಮಗುವಿನ ಆರೋಗ್ಯಕರ ಬೆಳವಣಿಗೆ ಮತ್ತು ಯಾವುದೇ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ತಿಳಿದು ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲು ಮಾತ್ರ ಭ್ರೂಣ ಪತ್ತೆಗೆ ಕಾನೂನಿನಲ್ಲಿ ಅವಕಾಶವಿದ್ದು, ಇದಕ್ಕೆ ನಿಗಧಿತ ನಮೂನೆಯಲ್ಲಿ ಪೋಷಕರ ಲಿಖಿತ ಒಪ್ಪಿಗೆ ಪತ್ರದ ಅಗತ್ಯವಿದ್ದು, ಇದನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಉಲ್ಲಂಘಿಸಿ, ಕಾನೂನನ್ನು ದುರ್ಬಳಕೆ ಮಾಡಿಕೊಂಡಲ್ಲಿ ಮೊದಲ ಬಾರಿಗೆ 3 ವರ್ಷ ಜೈಲು ಮತ್ತು
10000 ರೂ. ದಂಡ ಹಾಗೂ ಇದು ಪುನರಾವರ್ತನೆಯಾದಲ್ಲಿ 5 ವರ್ಷ ಜೈಲು ಹಾಗೂ 50000 ರೂ. ವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದರು.
ಇತ್ತೀಚೆಗೆ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಪುರುಷರಿಗೆ ಸಮಾನವಾಗಿ ಕಾರ್ಯ ನಿರ್ವಹಿಸುತ್ತಿದ್ದು, ತಮಗೆ ಹೆಣ್ಣು ಮಕ್ಕಳು ಜನಿಸಲಿ ಎಂದು ಆಸೆ ಪಡುವ ಪೋಷಕರ ಸಂಖ್ಯೆಯೂ ಅಧಿಕವಾಗಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಸಮಾಜದಲ್ಲಿ ಮಹಿಳೆ ಮತ್ತು ಪುರುಷರ ಲಿಂಗಾನುಪಾತ ಸಮಾನವಾಗಿರಲು ಇದರಿಂದ ಸಾಧ್ಯವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆ ಮಾಹಿತಿ ನೀಡುವ ಕರಪತ್ರ ಬಿಡುಗಡೆ ಮಾಡಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ, ಜಿಲ್ಲೆಯಲ್ಲಿ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಪ್ರಕರಣಗಳು ಅತ್ಯಂತ ಕಡಿಮೆಯಿದ್ದು, ಜಿಲ್ಲೆಯಲ್ಲಿನ ಎಲ್ಲಾ ಸ್ಕ್ಯಾನಿಂಗ್ ಸೆಂಟರ್ಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲನೆ ನಡೆಸಲಾಗುತ್ತಿದ್ದು, ಪ್ರತೀ ತಿಂಗಳು ಜಿಲ್ಲಾ ಮಟ್ಟದ ಸಮಿತಿಯಿಂದ ಪರಿಶೀಲನಾ ಸಭೆಯಲ್ಲಿ ಸಹ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಪ್ರಸಾದಿನಿ, ಪ್ರಸೂತಿ ತಜ್ಞೆ ಡಾ.ಶಶಿಕಲಾ ಭಟ್, ರೇಡಿಯಾಲಾಜಿಸ್ಟ್ ಡಾ.ಅನಿತಾ ಎಸ್ ಪ್ರಭು ಮಾಹಿತಿ ನೀಡಿದರು.
ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಲತಾ ನಾಯಕ್ ಸ್ವಾಗತಿಸಿ ನಿರೂಪಿಸಿದರು. ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಎಂ.ಜಿ. ರಾಮ ವಂದಿಸಿದರು.