ಉಡುಪಿ : ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಪೂರ್ವಾನುಮತಿ ಪಡೆಯದೇ ಫ್ಲೆಕ್ಸ್ ಬ್ಯಾನರ್ ಹಾಕಿದಕ್ಕೆ ಉಡುಪಿ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಅಭ್ಯರ್ಥಿ ಮೇಲೆ ಪ್ರಕರಣ ದಾಖಲಾಗಿದೆ
ಉಡುಪಿ ನಗರ ಠಾಣೆಯಲ್ಲಿ ಫ್ಲೈಯಿಂದ್ ಸ್ಟ್ಯಾಡ್ ಅಧಿಕಾರಿ ರೋಶನ್ ಕುಮಾರ್ ಅವರು ದೂರು ದಾಖಲಿಸಿದ್ದಾರೆ., ಉಡುಪಿ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಸಂಭಾವ್ಯ ಅಭ್ಯರ್ಥಿ ಎಂದು ಬಿಂಬಿತ ಪ್ರಭಾಕರ ಪೂಜಾರಿ ತೊಟ್ಟಂ ಎಂಬುವವರು ಫ್ಲೆಕ್ಸ್ ಗಳನ್ನು ಅಳವಡಿಸಿರುವ ಬಗ್ಗೆ ಪ್ರಾಧಿಕಾರದಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಸಾರ್ವಜನಿಕರಿಗೆ ಪ್ರದರ್ಶಿತವಾಗುವಂತೆ ಫ್ಲೆಕ್ಸ್ ಗಳನ್ನು ಅಳವಡಿಸಿ, ಚಾಲ್ತಿಯಲ್ಲಿರುವ ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಉಡುಪಿಯ ಶಿವಳ್ಳಿ ಗ್ರಾಮದ ಕಲ್ಸಂಕ ಜಂಕ್ಷನ್ ಬಳಿಯ ಆಮ್ ಆದ್ಮಿ ಪಕ್ಷದ ಕಛೇರಿ ಮುಂಭಾಗದಲ್ಲಿ ಪಕ್ಷದ ಮುಖಂಡರಾದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಪಕ್ಷದ ಚಿಹ್ನೆಪೊರಕೆಯನ್ನು ಹಿಡಿದಿರುವ ಭಾವಚಿತ್ರವುಳ್ಳ ಎರಡು ಪ್ಲಾಸ್ಟಿಕ್ ಫ್ಲೆಕ್ಸ್ ಗಳನ್ನು ಅಳವಡಿಸಿದ ವಿರುದ್ದ ದೂರು ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಉಡುಪಿ ತಾಲೂಕು ಮೂಡನಿಡಂಬೂರು ನಾಯರ್‌ಕೆರೆ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಎದುರು ತೆಂಗಿನ ಗರಿಯ ಚಪ್ಪರದ ಎದುರಿನ ಎರಡು ಅಡಿಕೆ ಕಂಬಗಳಿಗೆ ಎರಡು ಪ್ಲಾಸ್ಟಿಕ್ ಫ್ಲೆಕ್ಸ್ ಗಳನ್ನು ಅಳವಡಿಸಿದ್ದು, ಫ್ಲೆಕ್ಸನ ಕೆಳಭಾಗದಲ್ಲಿ ಉಡುಪಿ ವಿಧಾನ ಸಭಾ ಕ್ಷೇತ್ರದ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿ ಎಂದು ಬಿಂಬಿತ ಪ್ರಸಾದ್‌ರಾಜ್ ಕಾಂಚನ್‌ರವರ ಭಾವಚಿತ್ರವಿರುವ, ಪಕ್ಕದಲ್ಲಿ ‘ಅಭಿವೃದ್ಧಿಗಾಗಿ ನಿಮ್ಮ ಮತ’ ಎಂಬುದಾಗಿ ನಮೂದಿರುವುದು ಕಂಡುಬಂದಿರುತ್ತದೆ. ಫ್ಲೆಕ್ಸ್ ಗಳನ್ನು ಅಳವಡಿಸಿರುವ ಬಗ್ಗೆ ಪ್ರಾಧಿಕಾರದಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಸಾರ್ವಜನಿಕರಿಗೆ ಪ್ರದರ್ಶಿತವಾಗುವಂತೆ ಫ್ಲೆಕ್ಸ್ ಗಳನ್ನು ಅಳವಡಿಸಿದ್ದು, ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಪ್ರಸಾದ್‌ರಾಜ್ ಕಾಂಚನ್ ಹಾಗೂ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಸಮಿತಿ, ಉಡುಪಿ-ಬ್ರಹ್ಮಾವರ ರವರು ಚಾಲ್ತಿಯಲ್ಲಿರುವ ಮಾದರಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದಾಗಿ ದೂರು ನೀಡಲಾಗಿದೆ.