ಉಡುಪಿ: ರಸ್ತೆ ಸೇರಿದಂತೆ ಯಾವುದೇ ಅಭಿವೃದ್ಧಿ ಕಾಮಗಾರಿ ಆಗಬೇಕಾದ್ರೆ ಮೊದಲು 40 ಪರ್ಸೆಂಟ್ ಕಮಿಷನ್ ಪಾವತಿಸಬೇಕು. ಆದಾದ ಬಳಿಕವೇ ಕಾಮಗಾರಿಗೆ ಪಿಕ್ಕಾಸು ಬೀಳುವುದು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆರೋಪಿಸಿದರು.
ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಪು ವಿಧಾನಸಭಾ ಕ್ಷೇತ್ರಾದ್ಯಂತ ಹಮ್ಮಿಕೊಳ್ಳಲಾದ ಕರಾವಳಿ ಪ್ರಜಾಧ್ವನಿ ಯಾತ್ರೆಯ ಪ್ರಯುಕ್ತ ಆತ್ರಾಡಿಯಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಾವುದೇ ಸರಕಾರಿ ಕಚೇರಿಗಳಿಗೆ ಹೋಗಬೇಕಾದರೂ ದಲ್ಲಾಳಿಗಳ ಮೂಲಕವೇ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ಸವಗಳನ್ನು ಮಾಡುವ ಮೂಲಕ ಜನರ ತೆರಿಗೆಯ ಹಣವನ್ನು ಲೂಟಿ ಹೊಡೆಯುವ ಕಾರ್ಯ ಆಗುತ್ತಿದೆ ಎಂದು ಬಿಜೆಪಿ ಸರಕಾರದ ವಿರುದ್ದ ಹರಿಹಾಯ್ದರು.
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಹಾಗೂ ಮೈಸೂರು ವಿಭಾಗೀಯ ಉಸ್ತುವಾರಿ ರೋಝಿ ಜಾನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಲಾಲ್, ಮುಖಂಡರಾದ ಇಸ್ಮಾಯಿಲ್ ಆತ್ರಾಡಿ, ಹರೀಶ್ ಹೆಗ್ಡೆ, ಗೀತಾ ವಾಗ್ಳೆ, ಬಾಬಣ್ಣ ನಾಯಕ್, ನವೀನ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಸುಧೀರ್ ಪಟ್ಲ ಸ್ವಾಗತಿಸಿದರು. ಲಕ್ಷ್ಮೀನಾರಾಯಣ ಪ್ರಭು ಕಾರ್ಯಕ್ರಮ ನಿರೂಪಿಸಿದರು.