ಕೋಡಿಬೆಂಗ್ರೆ ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆ: ಶಾಲೆಗೆ ಬೀಗ ಜಡಿದು ಪ್ರತಿಭಟಿಸಿದ ಗ್ರಾಮಸ್ಥರು

ಉಡುಪಿ: ಶಿಕ್ಷಕರ ವರ್ಗಾವಣೆ ವಿರೋಧಿಸಿ ಕೋಡಿ ಬೆಂಗ್ರೆ ಹಿರಿಯ ಪ್ರಾಥಮಿಕ ಶಾಲೆಗೆ ಬೀಗ ಜಡಿದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತಗತಿವರೆಗೆ ಒಟ್ಟು ಎಂಭತ್ತು ವಿದ್ಯಾರ್ಥಿಗಳು ಕಲಿಯುತ್ತಿದ್ದು, ಇಷ್ಟು ವಿದ್ಯಾರ್ಥಿಗಳಿಗೆ ಮೂವರು ಶಿಕ್ಷಕರಿದ್ದರು. ಇದೀಗ ಅವರಲ್ಲಿ ಒಬ್ಬರನ್ನು ವರ್ಗಾವಣೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದ್ದು ಇದಕ್ಕೆ ಗ್ರಾಮಸ್ಥರಿಂದ ಭಾರೀ ವಿರೋಧ ವ್ಯಕ್ತವಾಗಿದೆ.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸ್ಥಳೀಯ ಮುಖಂಡ ರಮೇಶ್ ತಿಂಗಳಾಯ, ಸರ್ಕಾರಿ ಶಾಲೆಯನ್ನು ನೇರವಾಗಿ ಮುಚ್ಚದೆ, ಹಿಂಬಾಗಿಲಿಂದ ಮುಚ್ಚಲು ಪ್ರಯತ್ನಿಸಲಾಗುತ್ತಿದೆ. ಶಿಕ್ಷಣಾಧಿಕಾರಿಗಳು, ಉದ್ಯಮಿಗಳು ಅಥವಾ ರಾಜಕಾರಣಿಗಳಿಗೆ ಆಸಕ್ತಿ ಇದ್ದರೆ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ದಿ ಪಡಿಸಲಿ. ಶಿಕ್ಷಣವನ್ನು ಇಂದು ಉದ್ಯೋಗಕ್ಕಾಗಿ ಬಳಸುತ್ತಿರುವುದು ಖೇದಕರ ಎಂದರು.

ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ಕೊಡದೆ ಸತಾಯಿಸಲಾಗುತ್ತಿದೆ. ಈ ಹಿಂದೆ ಪ್ರತಿಭಟನೆ ನಡೆದಾಗಲೂ ಬಂಧಿಸುವ ಯತ್ನ ನಡೆದಿತ್ತು. ಈ ಬಾರಿಯೂ ಅಂತಹ ಪ್ರಯತ್ನ ನಡೆಯುತ್ತಿದೆ. ಊರಿನಲ್ಲಿರುವ ಏಕೈಕ ಶಾಲೆಯ ಎಂಭತ್ತು ಮಕ್ಕಳು ಕೇವಲ ಎರಡು ಶಿಕ್ಷಕರಿಂದ ಕಲಿಯುವುದು ಹೇಗೆ ಎಂದು ಪ್ರಶ್ನಿಸಿದ ಅವರು ಬಡ ಕೂಲಿ ಕಾರ್ಮಿಕರ ಮತ್ತು ಮೀನುಗಾರರ ಮಕ್ಕಳಿಗೆ ನ್ಯಾಯ ದೊರೆಯುವವರೆಗೂ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಶಾಲೆಯ ಉಳಿವಿಗಾಗಿ ಮತ್ತು ಮಕ್ಕಳ ಭವಿಷ್ಯಕ್ಕಾಗಿ ಸರಕಾರ ವರ್ಗಾವಣೆಯನ್ನು ಕೈಬಿಡಬೇಕು ಮತ್ತು ಹೆಚ್ಚುವರಿಯಾಗಿ ಇನ್ನೂ ನಾಲ್ಕು ಶಿಕ್ಷಕರನ್ನು ನೆಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.