ಕದ್ರಂಜೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಗ್ರಾಮಸ್ಥರಿಂದ ಮುಷ್ಟಿ ಕಾಣಿಕೆ ಸಮರ್ಪಣೆ

ಉಡುಪಿ: ಬ್ರಹ್ಮಾವರ ಬಿಲ್ಲಾಡಿ ಗ್ರಾಮದ ನೈಲಾಡಿ ಕದ್ರಂಜೆಯ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಗುರುವಾರ ಗ್ರಾಮಸ್ಥರಿಂದ ಮುಷ್ಟಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ನೆರವೇರಿತು.

ಪ್ರಾಯಶ್ಚಿತ್ತ ಹೋಮ ಹವನ ಕಲಶಾಭಿಷೇಕಗಳಂತಹ ಧಾರ್ಮಿಕ ವಿಧಿವಿಧಾನಗಳನ್ನು ವೈದಿಕರು ನೆರವೇರಿಸಿದರು. ಬಳಿಕ ಸರ್ವಾಪರಾಧ ಪ್ರಾಯಶ್ಚಿತ್ತಕ್ಕಾಗಿ ಮತ್ತು ರುದ್ರ ಸನ್ನಿಧಿಯ ಉತ್ಥಾನಕ್ಕಾಗಿ ಪೂರ್ಣಶ್ರದ್ಧೆ, ಪೂರ್ಣ ತನುಮನಧನ ಸಹಿತ ಒಗ್ಗಟ್ಟಿನಿಂದ ದೇವಳ ಪುನರ್ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗುವ ಸಂಕೇತವಾಗಿ ಮುಷ್ಟಿ ಕಾಣಿಕೆ ಸಲ್ಲಿಸುವ ವಿಧಿಯನ್ನು ನೆರವೇರಿಸಲಾಯಿತು.

ಮಹಾಲಿಂಗೇಶ್ವರನ ಮುಂಭಾಗದಲ್ಲಿ ಇಟ್ಟ ದೊಡ್ಡ ಪಾತ್ರೆಗೆ ಸಮಸ್ತ ಗ್ರಾಮಸ್ಥರು ಮುಷ್ಟಿ ಕಾಣಿಕೆ ಒಪ್ಪಿಸಿ, ಇಡೀ ಗ್ರಾಮದ ಹತ್ತು ತಾಯ ಮಕ್ಕಳೊಂದಾಗಿ ಗ್ರಾಮಾಧಿಪತಿಯ ಮಂದಿರ ಕಟ್ಟುತ್ತೇವೆಂದು ಶ್ರದ್ಧೆಯಿಂದ ಪ್ರಾರ್ಥಿಸಿದರು.

ಈ ತೀರಾ ಪುಟ್ಟಹಳ್ಳಿಯಲ್ಲಿ ಗ್ರಾಮಕ್ಕೆ ಗ್ರಾಮವೇ ಭಕ್ತಿಯಿಂದ ಒಟ್ಟು ಸೇರಿದ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಳ್ಳುವುದೇ ಒಂದು ಸಂಭ್ರಮ. ದಶಕಗಳ ಬಳಿಕ ಈ ಸಂಭ್ರಮವನ್ನು ಊರ ಹಿರಿಯರು ಮುಕ್ತ ಮನಸ್ಸಿನಿಂದ ಕೊಂಡಾಡಿದರು. ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಸಹಕರಿಸಿದರು. ಒಂದೂವರೆ ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನ ಪ್ರಸಾದದ ವ್ಯವಸ್ಥೆಯೂ ಮಾಡಲಾಗಿತ್ತು.

ದೇಗುಲದ ಇತಿಹಾಸ:
ಐದಾರು ದಶಕಗಳಿಂದ ಯಾರದೋ ಅವಜ್ಞೆಯಿಂದ ಊರ ದೇವ ರುದ್ರ ಸನ್ನಿಧಿ ನೆಲಸಮವಾಗಿತ್ತು. ಅದೇ ದೇವಳದ ಚಾವಡಿಯಲ್ಲೇ ನಡೆಯುತ್ತಿದ್ದ ಶಾಲೆಯಲ್ಲಿ ಕಲಿತ ನೂರಾರು ಮಂದಿಯೂ ಅಸಹಾಯಕರಾದರು. ಅಲ್ಲೇ ಸುತ್ತಲ್ಲಿದ್ದ ಅಗ್ರಹಾರದಲ್ಲಿದ್ದ ಬ್ರಾಹ್ಮಣ ಕುಟುಂಬಗಳೂ ಊರು ಬಿಟ್ಟು ನಗರದೆಡೆಗೆ ಗುಳೇ ಹೊರಟಿದ್ದರು. ಆದರೆ ಕಡೆಗೂ ದೇಗುಲದ ಜೀರ್ಣೋದ್ಧಾರಕ್ಕೆ ಕಾಲ ಕೂಡಿ ಬಂದಿದ್ದು, ಮತ್ತೆ ಊರ ಜನ ಒಂದಾಗಿದ್ದಾರೆ.

ಕದ್ರಂಜೆಯ ಮಹಾಲಿಂಗೇಶ್ವರನಿಗೆ ತಮ್ಮಿಂದಾದ ಅಪರಾಧದ ಬಗ್ಗೆ ಕ್ಷಮೆ ಕೇಳಿದ್ದಾರೆ. ಕೇರಳದ ನುರಿತ ಜ್ಯೋತಿಷಿ ಮಾಧವನ್ ಪೊದುವಾಳ್ ನೇತೃತ್ವದಲ್ಲಿ ಅಷ್ಟಮಂಗಳ ಪ್ರಶ್ನಾ ಚಿಂತನೆಯನ್ನು ನೆರವೇರಿಸಲಾಗಿದೆ. ಅಯೋಧ್ಯೆ ರಾಮ ಮಂದಿರ ಟ್ರಸ್ಟ್‌ ನ ವಿಶ್ವಸ್ತ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರೂ ಸ್ಥಳಕ್ಕೆ ಧಾವಿಸಿ ಶೀಘ್ರ ಶಿವಾಲಯೋತ್ಥಾನವಾಗಲೆಂದು ಪ್ರಾರ್ಥಿಸಿದರು. ಅಷ್ಟಮಂಗಲದಲ್ಲಿ ಕಂಡು ಬಂದ ದೋಷಗಳಿಗೆ ಪ್ರಾಯಶ್ಚಿತ್ತವೂ ತಿಂಗಳೊಂದರಲ್ಲೇ ನೆರವೇರಿಸಲಾಯಿತು.

ಈ ಪ್ರಕ್ರಿಯೆಯ ಅಂತಿಮ ಹಂತವಾಗಿ ಇಂದು ಪ್ರಾಯಶ್ಚಿತ್ತ ಹೋಮ ಹವನ ಕಲಶಾಭಿಷೇಕ ವಿಧಿಗಳನ್ನು ನೆರವೇರಿಸಲಾಯಿತು.