ವಂಡ್ಸೆ: ಕೆಸರು ಗದ್ದೆಯಂತೆ ಆದ ರಸ್ತೆ; ಗ್ರಾಮಸ್ಥರ ಗೋಳು ಕೇಳುವವರಿಲ್ಲ.!

ವಂಡ್ಸೆ: ಕೆಸರು ಗದ್ದೆಯಂತೆ ಆದ ರಸ್ತೆ. ಈ‌ ರಸ್ತೆಯಲ್ಲಿ ಬಂದ್ರೆ ಕಾಲು ಹೂತು ಹೋಗುವುದಂತೂ ಗ್ಯಾರಂಟಿ. ನಿತ್ಯ ಕೆಸರು ತುಂಬಿಕೊಂಡಿರುವ ರಸ್ತೆಯಲ್ಲೇ ಓಡಾಡಬೇಕಾದ ಅನಿವಾರ್ಯತೆ ಇಲ್ಲಿನ ಗ್ರಾಮಸ್ಥರದ್ದು.

ಹೌದು, ಇದು ವಂಡ್ಸೆ ಪೇಟೆಯ ಅನತಿ ದೂರದಲ್ಲಿರುವ ಕಾನಮ್ಮ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಅಡಿಕೆಕೋಡ್ಲು ಸಂಧಿಸುವ ರಸ್ತೆಯ ದುಸ್ಥಿತಿ. ಈ ಸಮಸ್ಯೆ ಇಂದು ಮೊನ್ನೆಯದಲ್ಲ, ಕಳೆದ ಹತ್ತು ವರ್ಷಗಳಿಂದ ಇಲ್ಲಿನ ಜನರು ಅನುಭವಿಸುತ್ತಿರುವ ತೊಂದರೆ. ಆದ್ರೆ ಈ ಸಮಸ್ಯೆಗೆ ಈವರೆಗೂ‌ ಮುಕ್ತಿ ಸಿಕ್ಕಿಲ್ಲ.

ಅಂದಹಾಗೆ ಇದು ಪಂಚಾಯತ್ ಅಧ್ಯಕ್ಷರ ವಾರ್ಡ್ ನ ವ್ಯಾಪ್ತಿಗೆ ಬರುವ ರಸ್ತೆ. ಆದ್ರೆ, ಅಧ್ಯಕ್ಷರಿಂದ ಭರವಸೆ ಮಾತ್ರ ಸಿಕ್ಕಿತೇ ಹೊರತು, ರಸ್ತೆಯಂತೂ ದುರಸ್ತಿಯಾಗಿಲ್ಲ. ಗ್ರಾಮಸ್ಥರು ಗ್ರಾಪಂಗೆ ಸಾಕಷ್ಟು ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳಿಂದ ಭರವಸೆಯ ಮಾತು ಬಂತೇ ವಿನಾಃ ರಸ್ತೆ ಮಾತ್ರ ಅಭಿವೃದ್ಧಿ ಆಗಿಲ್ಲ. ಪ್ರತಿ ಗ್ರಾಮಸಭೆಯಲ್ಲೂ ಈ ಬಗ್ಗೆ ಗ್ರಾಮಸ್ಥರು ಧ್ವನಿ ಎತ್ತಿದರೂ, ಅದು ಫೋಟೊ ತೆಗೆದುಕೊಂಡು ಹೋಗಲು ಮಾತ್ರ ಸೀಮಿತವಾಗುತ್ತಿದೆ ಎಂದು ಗ್ರಾಮಸ್ಥರು ಅಳಲು ವ್ಯಕ್ತಪಡಿಸಿದ್ದಾರೆ.

ಶಾಲಾ ಮಕ್ಕಳು, ಡೈರಿಗೆ ಹಾಲು ತೆಗೆದುಕೊಂಡು ಹೋಗುವ ಮಹಿಳೆಯರ ಗೋಳಂತೂ ಕೇಳುವವರಿಲ್ಲ. ಕೆಸರಿನಲ್ಲೇ ಪರದಾಡಬೇಕಾದ ಸ್ಥಿತಿ ಅವರದ್ದು. ಇಲ್ಲಿನ ನಿವಾಸಿಗಳು ಈ ರಸ್ತೆ ಬಿಟ್ಟರೆ, ಐದಾರು ಕಿ.ಮೀ ದೂರ ಸುತ್ತಿಕೊಂಡು ಹೋಗಬೇಕು. ಹೀಗಾಗಿ ಈ ರಸ್ತೆಯನ್ನು‌ ಆದಷ್ಟು ಬೇಗ ದುರಸ್ತಿ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.