ಕಂದಾಯ ಸಚಿವರ ಗ್ರಾಮ ವಾಸ್ತವ್ಯ: 1000 ಕ್ಕೂ ಅಧಿಕ ಮಂದಿಗೆ ಸವಲತ್ತು ವಿತರಣೆ

ಉಡುಪಿ: ಫೆ.19 ರಂದು ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಗ್ರಾಮದಲ್ಲಿ ನಡೆಯುವ ರಾಜ್ಯದ ಕಂದಾಯ ಸಚಿವ ಆರ್. ಅಶೋಕ್ ಅವರ ಜನಸ್ಪಂದನ ಕಾರ್ಯಕ್ರಮದಲ್ಲಿ 1000 ಕ್ಕೂ ಅಧಿಕ ಮಂದಿಗೆ ವಿವಿಧ ಇಲಾಖೆಗಳಿಂದ ಸವಲತ್ತುಗಳನ್ನು ವಿತರಿಸಲಾಗುವುದು ಎಂದು ಶಾಸಕ ರಘುಪತಿ ಭಟ್ ಹೇಳಿದರು.

ಅವರು ಇಂದು ಕೊಕ್ಕರ್ಣೆಯ ಕೆಪಿಎಸ್ ಶಾಲೆಯಲ್ಲಿ, ಕಂದಾಯ ಸಚಿವರ ಜನಸ್ಪಂದನ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಕುರಿತು ಕೈಗೊಂಡಿರುವ  ಸಿದ್ಧತೆಗಳ ಕುರಿತು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಂದಾಯ ಸಚಿವರು ಫೆಬ್ರವರಿ 19 ರಂದು ಮಧ್ಯಾಹ್ನ 12.30 ಗಂಟೆಗೆ ಕೊಕ್ಕರ್ಣೆ ಬಸ್ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿಂದ ಅವರನ್ನು ವಿವಿಧ ಸಾಂಸ್ಕೃತಿಕ ಕಲಾತಂಡಗಳ ಮೆರವಣಿಗೆಯಲ್ಲಿ, ಎತ್ತಿನ ಬಂಡಿ ಮೂಲಕ ಗ್ರಾಮಸ್ಥರೊಂದಿಗೆ ಕೊಕ್ಕರ್ಣಿಯ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ನಡೆಯುವ ಕಾರ್ಯಕ್ರಮದ ಸ್ಥಳಕ್ಕೆ ಕರೆ ತರಲಾಗುವುದು.

ಮೊದಲಿಗೆ ಸಚಿವರು ಪಶು ಸಂಗೋಪನೆ ಇಲಾಖೆಯಿಂದ ವ್ಯವಸ್ಥೆ ಮಾಡಲಾದ ಇಲಾಖೆಯ ಸ್ಟಾಲ್ ನ್ನು ಗೋಪೂಜೆಯ ಮೂಲಕ ಪ್ರಾರಂಭಿಸಿ, ನಂತರ ವಿವಿಧ ಇಲಾಖೆಗಳಿಂದ ಸಾರ್ವಜನಿಕರಿಗೆ ಮಾಹಿತಿ ನೀಡಲು ಹಾಕಿರುವ ಸ್ಟಾಲ್ ಗಳನ್ನು ಉದ್ಘಾಟನೆ ಮಾಡಲಿದ್ದಾರೆ.

ಭೋಜನಾ ವಿರಾಮದ ನಂತರ  ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಉಡುಪಿ ವಿಧಾನ ಸಭಾ ಕ್ಷೇತ್ರ ಹಾಗೂ ಬ್ರಹ್ಮಾವರ ತಾಲೂಕಿನ ವಿವಿಧ ಇಲಾಖೆಗಳಾದ, ಕಂದಾಯ ಇಲಾಖೆ ವತಿಯಿಂದ 350 ಫಲಾನುಭವಿಗಳಿಗೆ ಸಾಮಾಜಿಕ ಯೋಜನೆಗಳ ಆದೇಶ ಪ್ರತಿಗಳನ್ನು , 15 ಫಲಾನುಭವಿಗಳಿಗೆ ರಾಷ್ಟ್ರೀಯ ಭದ್ರತಾ ಯೋಜನೆಯ ಪರಿಹಾರ ಚೆಕ್ ಗಳನ್ನು, 572 ಜನರಿಗೆ ಬಿಪಿಎಲ್  ಕಾರ್ಡ್ ಗಳನ್ನು ವಿತರಣೆ ಮಾಡಲಿದ್ದು, ಇದಲ್ಲದೆ ಕೃಷಿ ಇಲಾಖೆ ಮೂಲಕ 7 ಫಲಾನುಭವಿಗಳಿಗೆ, ಟ್ರಾಕ್ಟರ್ ಮತ್ತು ಟಿಪ್ಪರ್ ಗಳನ್ನು ಮತ್ತು ತೋಟಗಾರಿಕೆ ಇಲಾಖೆಯಿಂದ 5 ಫಲಾನುಭವಿಗಳಿಗೆ ಸವಲತ್ತುಗಳನ್ನು, ಪಶುಸಂಗೋಪನಾ ಇಲಾಖೆಯಿಂದ 3 ಜನ, ಮೀನುಗಾರಿಕೆ ಇಲಾಖೆಯಿಂದ 5, ತಾಲೂಕು ಪಂಚಾಯತಿನಿಂದ  47 ಜನರಿಗೆ ಮತ್ತು ಆರೋಗ್ಯ ಇಲಾಖೆಯಿಂದ 30 ಜನರಿಗೆ ಹಾಗೂ ಮತ್ತು ಹಿಂದುಳಿದ ವರ್ಗ ಕಾರ್ಪೊರೇಶನ್ ವತಿಯಿಂದ 3, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 60, ಸಮಾಜ ಕಲ್ಯಾಣ ಇಲಾಖೆಯಿಂದ 4, ಐಟಿಡಿಪಿಯಿಂದ 3 ಜನ ಮತ್ತು ಆಹಾರ ಇಲಾಖೆಯಿಂದ 10, ಅಂಗವಿಕಲ ಇಲಾಖೆಯಿಂದ 26 ಶ್ರವಣ ಸಾಧನಗಳು ಸೇರಿದಂತೆ 1000ಕ್ಕೂ ಹೆಚ್ಚು ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ನೀಡಲಿದ್ದಾರೆ.

ಸಂಜೆ 4 ಗಂಟೆಗೆ ಡ್ರೀಮ್ಡ್ ಫಾರೆಸ್ಟ್ ಕಾರಣದಿಂದ ಬಾಕಿ ಉಳಿದಿರುವ 94ಸಿ ಮತ್ತು ನಮೂನೆ 50 ಮತ್ತು 53 ರ ಗ್ರಾಮಸ್ಥರು/ ರೈತರೊಂದಿಗೆ ಸಚಿವರು ಸಂವಾದ ಕಾರ್ಯಕ್ರಮ ನಡೆಸಲಿದ್ದು, ಸಂಜೆ 5.00 ಗಂಟೆಗೆ ಕುಡುಬಿ ಜನಾಂಗದವರೊಂದಿಗೆ ಕೊಕ್ಕರ್ಣೆಗೆ  ಒಳಬೈಲುವಿನಲ್ಲಿ ಸಮಾಲೋಚನೆ ನಡೆಸಿ, 6 ಗಂಟೆಗೆ ಆಲೂರು ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಅದೇ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಆ ಬಳಿಕ ವಸತಿ ಶಾಲೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಫೆಬ್ರವರಿ 20 ರಂದು ಬೆಳಿಗ್ಗೆ ಕಂಜೂರು ಗ್ರಾಮದ ಕೊರಗ ಸಮುದಾಯದ ಜನರ ಮನೆಯಲ್ಲಿ ಉಪಾಹಾರ ಸೇವನೆ ಮಾಡಿ, ಅವರೊಂದಿಗೆ ಸಮಾಲೋಚನೆ ಮಾಡಲಿದ್ದಾರೆ, ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಎಲ್ಲಾ ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿರಲಿದ್ದು, ಗ್ರಾಮಸ್ಥರು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸವಲತ್ತುಗಳನ್ನು ಪಡೆದುಕೊಳ್ಳುವಂತೆ ಹಾಗೂ ಅಹವಾಲುಗಳನ್ನು ಸಲ್ಲಿಸುವಂತೆ ರಘುಪತಿ ಭಟ್ ಹೇಳಿದರು.