ಚಂದ್ರ ಇನ್ನು ನಮಗೆ ಹತ್ತಿರ!! ವಿಕ್ರಂ ಲ್ಯಾಂಡರ್ ಬೇರ್ಪಡಿಸುವಿಕೆ ಯಶಸ್ವಿ

ಭಾರತದ ಬಹುನಿರೀಕ್ಷಿತ ಚಂದ್ರಯಾನ – 3 ಮಿಷನ್‌ಗೆ ದೊಡ್ಡ ಯಶಸ್ಸು ಸಿಕ್ಕಿದ್ದು, ವಿಕ್ರಂ ಲ್ಯಾಂಡರ್‌ ನೌಕೆಯಿಂದ ಯಶಸ್ವಿಯಾಗಿ ಬೇರ್ಪಟ್ಟಿದೆ. ಈ ಮೂಲಕ ವಿಕ್ರಂ ಲ್ಯಾಂಡರ್‌ ಚಂದ್ರನ ಅಂಗಳಕ್ಕೆ ಇಳಿಯಲು ಇನ್ನೊಂದೇ ಹೆಜ್ಜೆ ಬಾಕಿ ಇದೆ. ಮುಂದಿನ ಬುಧವಾರ ಆಗಸ್ಟ್‌ 23 ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಕಾಲಿಡುವ ನಿರೀಕ್ಷೆ ಇದೆ.

ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ ಇಸ್ರೋ “LM ಅನ್ನು ಪ್ರೊಪಲ್ಷನ್ ಮಾಡ್ಯೂಲ್ (PM) ನಿಂದ ಯಶಸ್ವಿಯಾಗಿ ಬೇರ್ಪಡಿಸಲಾಗಿದೆ. ನಾಳೆಗೆ ಯೋಜಿಸಲಾದ ಡೀಬೂಸ್ಟಿಂಗ್ ಮೇಲೆ LM ಸ್ವಲ್ಪ ಕಡಿಮೆ ಕಕ್ಷೆಗೆ ಇಳಿಯಲಿದೆ” ಎಂದು ತಿಳಿಸಿದೆ.

ಬೇರ್ಪಡುವಿಕೆಯ ನಂತರ ಪೆರಿಲುನ್ (ಚಂದ್ರನ ಸಮೀಪ ಬಿಂದು) 30 ಕಿಲೋಮೀಟರ್ ಮತ್ತು ಅಪೋಲುನ್ (ಚಂದ್ರನಿಂದ ದೂರದ ಬಿಂದು) 100 ಕಿ.ಮೀ. ಇರುವ ಕಕ್ಷೆಯಲ್ಲಿ ಇರಿಸಲು ಲ್ಯಾಂಡರ್ “ಡೀಬೂಸ್ಟ್” (ನಿಧಾನಗೊಳಿಸುವ ಪ್ರಕ್ರಿಯೆ) ಒಳಗಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಕಕ್ಷೆಯಿಂದ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಾಫ್ಟ್ ಲ್ಯಾಂಡಿಂಗ್ ಅನ್ನು ಆಗಸ್ಟ್ 23 ರಂದು ಪ್ರಯತ್ನಿಸಲಾಗುವುದು ಎಂದು ಇಸ್ರೋ ಹೇಳಿದೆ.

ಅತ್ತ ರಷ್ಯಾದ ಲೂನಾ 25 ಚಂದ್ರನ ಕಕ್ಷೆಯನ್ನು ಪ್ರವೇಶಿಸಿದೆ.