ಮಲ್ಪೆ: ಜನರ ಸಮಸ್ಯೆಗೆ ಸ್ಪಂದಿಸದೆ ವಿಳಂಬ ನೀತಿ ಅನುಸರಿಸುತ್ತಿದ್ದ ರಸ್ತೆ ಗುತ್ತಿಗೆದಾರರ ಮನೆಗೆ ವಿಜಯ್ ಕೊಡವೂರು ನೇತೃತ್ವದಲ್ಲಿ ಗ್ರಾಮಸ್ಥರೊಂದಿಗೆ ಭೇಟಿ ನೀಡಲಾಯಿತು.
ಮೂರನೇ ಹಂತದ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಲ್ಲಿ ಆಶೀರ್ವಾದ್ – ಉದ್ದಿನ ಹಿತ್ಲು – ತೊಟ್ಟಂ (3.5 ಕಿ ಮೀ)ನ ಮಾರ್ಗವು ಸುಮಾರು 305 ಲಕ್ಷ ರೂಪಾಯಿಗಳ ಅಂದಾಜು ಅನುದಾನದಲ್ಲಿ ನಿರ್ಮಾಣವಾಗಲಿರುವ ಕಾಂಕ್ರೀಟ್ ರಸ್ತೆಯ ಟೆಂಡರ್ ಅವಧಿಯು 09-08-2021 ರಿಂದ 09-07-2022 ರವರೆಗಿದ್ದು, ಮುಂದಿನ 5 ವರ್ಷಗಳ ನಿರ್ವಹಣೆಯ ಜವಬ್ದಾರಿಯೂ ಗುತ್ತಿಗೆದಾರರಾಗಿರುತ್ತದೆ. ಗುತ್ತಿಗೆದಾರರು ಮಳೆಗಾಲದ ನೆಪ ಹೇಳಿ ಕಾಮಗಾರಿಯನ್ನು ಮುಂದೂಡುತ್ತಾ ಬಂದಿದ್ದು ಇದು ಸುತ್ತಮುತ್ತಲಿನ ಜನರಿಗೆ ಬಹಳ ತೊದರೆಯನ್ನುಂಟು ಮಾಡುತ್ತಿದೆ. ಅನೇಕ ಬಾರಿ ಗುತ್ತಿಗೆದಾರರಲ್ಲಿ ಮನವಿ ಮಾಡಿದರೂ ಏನಾದರೊಂದು ಕುಂಟುನೆಪ ಹೇಳುತ್ತಾ ಕಾಮಗಾರಿಯನ್ನು ಮುಂದೂಡುತ್ತಾ ಬೇಜವಾಬ್ದಾರಿಯಿಂದ ಕಾಲಹರಣ ಮಾಡುತ್ತಾ ದಿನ ದೂಡುತ್ತಿದ್ದರು ಎನ್ನುವ ಆರೋಪ ಕೇಳಿಬಂದಿತ್ತು.
ವಿಳಂಬ ಕಾಮಗಾರಿಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಮನಗಂಡು, ಉಡುಪಿ ಕೊಡವೂರು ವಾರ್ಡಿನ ನಗರಸಭಾ ಸದಸ್ಯ ವಿಜಯ್ ಕೊಡವೂರು ನೇತೃತ್ವದಲ್ಲಿ ಊರಿನ ಹಿರಿಯರೊಂದಿಗೆ ನ. 22, ಮಂಗಳವಾರದಂದು ಗುತ್ತಿಗೆದಾರರ ಮನೆಗೆ ಹೋಗಿ ಕಾಮಗಾರಿಯನ್ನು ಕೂಡಲೇ ಮುಗಿಸಬೇಕು ಎಂದು ತಿಳಿಸಲಾಯಿತು. ಬಾಕಿ ಇರುವ ಕೆಲಸಗಳ ಮಾಹಿತಿ ನೀಡಿ ಜನರಿಗಾಗುವ ತೊಂದರೆಯನ್ನು ವಿವರಿಸಿ, ಗುತ್ತಿಗೆದಾರರನ್ನು ಕಾಮಗಾರಿ ಸ್ಥಳಕ್ಕೆ ಬರುವಂತೆ ಒತ್ತಾಯಿಸಿ ಬಾಕಿ ಇರುವ ಕಾಮಗಾರಿಗಳ ಪರಿಸ್ಥಿತಿಯ ಪ್ರತ್ಯಕ್ಷ ದರ್ಶನ ಮಾಡಿಸಲಾಯಿತು. ಇದರ ಫಲಶೃತಿಯಾಗಿ ಬುಧವಾರದಂದು ಕಾಮಗಾರಿಗೆ ಚಾಲನೆ ದೊರೆತಿದ್ದು ಗ್ರಾಮಸ್ಥರು ವಿಜಯ ಕೊಡವೂರು ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.