ಹೈದರಾಬಾದ್: ನಟ ವಿಜಯ್ ದೇವರಕೊಂಡ ಅವರ ಇತ್ತೀಚಿನ ಚಿತ್ರ ಲೈಗರ್ ನ ನಿಧಿಯ ಮೂಲದ ಬಗ್ಗೆ ತನಿಖೆ ನಡೆಯುತ್ತಿದ್ದು, ಜಾರಿ ನಿರ್ದೇಶನಾಲಯವು ನಟನನ್ನು ಕರೆದು ವಿಚಾರಣೆ ನಡೆಸಿದೆ. ಚಿತ್ರ ನಿರ್ಮಾಪಕ ಪುರಿ ಜಗನ್ನಾಥ್ ಮತ್ತು ನಿರ್ಮಾಪಕಿ ಚಾರ್ಮಿ ಕೌರ್ ಅವರನ್ನು ಚಿತ್ರ ನಿರ್ಮಾಣಕ್ಕೆ ಬಳಸಲಾದ ಹಣದ ಮೂಲದ ಕುರಿತು ಪ್ರಶ್ನಿಸಿದ ಎರಡು ವಾರಗಳ ನಂತರ ವಿಜಯ್ ಅವರನ್ನು ಕರೆಸಿಕೊಳ್ಳಲಾಗಿದೆ.
ವಿದೇಶಿ ಮೂಲದಿಂದ ಚಿತ್ರಕ್ಕೆ ಹಣ ಬಂದಿದೆ ಮತ್ತು ಇದರಲ್ಲಿ 1999 ರ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂಬ ವರದಿಗಳ ನಂತರ, ಇಡಿಯು ನಿರ್ಮಾಪಕರಿಗೆ ಮತ್ತು ನಟನಿಗೆ ಹಣಕಾಸುದಾರರ ಗುರುತಿನ ಬಗ್ಗೆ ತಿಳಿಯಲು ಸಮನ್ಸ್ ನೀಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ನಟ ವಿಜಯ್ ದೇವರಕೊಂಡ, ಹೆಚ್ಚಿನ ಜನಪ್ರಿಯತೆಯೊಂದಿಗೆ ಸವಾಲುಗಳು ಬರುತ್ತದೆ ಮತ್ತು ಅದರ ಬಗ್ಗೆ ನೀವು ಏನೂ ಮಾಡಲಾಗುವುದಿಲ್ಲ. ಆದರೆ ನಾನು ಇದನ್ನು ಒಂದು ಅನುಭವವಾಗಿ ನೋಡುತ್ತೇನೆ. ಅವರು ಕರೆದಾಗ ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ. ನಾನು ಹೋಗಿ ಅವರ ಪ್ರಶ್ನೆಗಳಿಗೆ ಉತ್ತರಿಸಿದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಉತ್ತರಿಸಿದ್ದಾರೆ.
ವರದಿಗಳ ಪ್ರಕಾರ ವಿಜಯ್ ಅವರನ್ನು 12 ಗಂಟೆಗಳ ಕಾಲ ಕುಳ್ಳಿರಿಸಿಕೊಂಡು ಪ್ರಶ್ನಿಸಲಾಗಿದೆ. ಇಡಿ ಅಧಿಕಾರಿಗಳು ಚಲನಚಿತ್ರ ನಿರ್ಮಾಣಕ್ಕೆ ಹಣ ನೀಡಿದ ಕಂಪನಿ ಅಥವಾ ವ್ಯಕ್ತಿಗಳ ಹೆಸರನ್ನು ತಿಳಿಯಲು ಬಯಸಿದೆ. ಚಿತ್ರಕ್ಕೆ ಹಣ ಹೂಡಿದ್ದು ವಿದೇಶದಿಂದ ಎಂದು ಅವರು ಬಲವಾಗಿ ನಂಬಿದ್ದಾರೆ. ಈ ನಿಧಿಯಲ್ಲಿ ಯಾವುದಾದರೂ ಎಫ್.ಇ.ಎಮ್.ಎ ಕಾನೂನು ಉಲ್ಲಂಘನೆಯಾಗಿದೆಯೇ ಎಂದು ಪರಿಶೀಲಿಸಲು ಅವರು ತನಿಖೆ ನಡೆಸುತ್ತಿದ್ದಾರೆ. ಕೆಲವೊಂದು ಮೂಲಗಳ ಪ್ರಕಾರ ರಾಜಕಾರಣಿಗಳು ತಮ್ಮ ಕಪ್ಪು ಹಣವನ್ನು ಚಿತ್ರ ನಿರ್ಮಾಣಕ್ಕೆ ನೀಡಿದ್ದಾರೆ ಎನ್ನಲಾಗುತ್ತಿದೆ ಎಂದು ಬಲ್ಲ ಮೂಲವೊಂದನ್ನು ಉಲ್ಲೇಖಿಸಿ ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.












