ಮಂಗಳೂರು: ಸಾಹಿತ್ಯವು ಭಾವನೆಗಳೊಂದಿಗೆ ಹುಟ್ಟಿಕೊಳ್ಳುತ್ತದೆ ಹೊರತು ಆಧುನಿಕ ಯಂತ್ರಗಳಿಂದಲ್ಲ. ಮನುಷ್ಯನು ಭಾವಜೀವಿ ಹಾಗಾಗಿ ಮನಸ್ಸಿನಲ್ಲಿ ಉಂಟಾಗುವ ಭಾವ ಪ್ರಪಂಚದ ಕಥೆ ವ್ಯಥೆಗಳೇ ಕಾವ್ಯಕ್ಕೆ ವಸ್ತು ಎಂದು ಹಿರಿಯ ಸಾಹಿತಿ ಡಾ.ವಸಂತ ಕುಮಾರ್ ಪೆರ್ಲ ಅವರು ಹೇಳಿದರು.
ದ.ಕ.ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಮಂಗಳೂರು ಘಟಕದ ಆಶ್ರಯದಲ್ಲಿ ಶನಿವಾರ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ನಡೆದ ವಿದ್ವಾನ್ ರಘುಪತಿ ಭಟ್ ರಚಿಸಿದ “ನಾನು ಮತ್ತು ನಾನು” ಭಾವ ಸಂಕಲನ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಾಹಿತಿ ಶಶಿರಾಜ್ ಕಾವೂರು ಮಾತನಾಡಿ, ರಘುಪತಿ ಭಟ್ ಅವರು ನಾನು ಮತ್ತು ನಾನು ಭಾವ ಸಂಕಲನದಲ್ಲಿ ಸಮಕಾಲೀನ ಮನುಷ್ಯ ಮತ್ತು ಆಧ್ಯಾತ್ಮಿಕ ಭಾವ ಪ್ರಪಂಚದ ವಸ್ತುಗಳನ್ನು ಕೇಂದ್ರಿಕರಿಸಿ ಕಾವ್ಯವನ್ನು ರಚಿಸಿದ್ದಾರೆ. ಕಾವ್ಯವು ಮಾನವ ಸಂಬಂಧಗಳನ್ನು ಒಟ್ಟುಗೂಡಿಸುತ್ತದೆ. ಆ ಮೂಲಕ ಕಾವ್ಯವು ನಮಗೆ ಒಂದು ಸುಖ ನೀಡುತ್ತದೆ ಎಂದರು.
ವೇದಿಕೆಯಲ್ಲಿ ಕ.ಸಾ.ಪ ಮಂಗಳೂರು ಘಟಕದ ಅಧ್ಯಕ್ಷ ಮಂಜುನಾಥ್ ರೇವಣಕರ್, ಕೃತಿಕಾರ ವಿದ್ವಾನ್ ರಘುಪತಿ ಭಟ್, ಎನ್. ಸುಬ್ರಾಯ ಭಟ್, ಶ್ರೀಕೃಷ್ಣ ಭಟ್ ಉಪಸ್ಥಿತರಿದ್ದರು.
ಎನ್.ಗಣೇಶ್ ಪ್ರಸಾದ್ ಜಿ ಸ್ವಾಗತಿಸಿದರು, ಕರುಣಾಕರ ಬಳ್ಕೂರು ಅತಿಥಿಗಳ ಪರಿಚಯ ಮಾಡಿದರು. ಎನ್. ಸುಬ್ರಾಯ ಭಟ್ ವಂದಿಸಿದರು. ರತ್ನಾವತಿ ಬೈಕಾಡಿ ನಿರೂಪಿಸಿದರು. ಜಿಲ್ಲೆಯ ಪ್ರಸಿದ್ಧ ಕವಿಗಳಿಂದ ಕವಿತೆಯ ಮಾತಿನ ಮಂಟಪ ವಿಶಿಷ್ಟ ಕಾರ್ಯಕ್ರಮ ನಡೆಯಿತು.