ಉಡುಪಿ: ಜಿಲ್ಲೆಯಲ್ಲಿ ಇಂದು ನಡೆದ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರಗಳ ವಿಧಾನ ಪರಿಷತ್‌ನ ದ್ವೈವಾರ್ಷಿಕ ಚುನಾವಣೆಯು ಶಾಂತಿಯುತವಾಗಿ ನಡೆದಿದ್ದು, ಒಟ್ಟು ಶೇ. 99.48 ಮತದಾನ ನಡೆದಿದ್ದು, ಜಿಲ್ಲೆಯ ಗ್ರಾಮ ಪಂಚಾಯತ್ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ 1203 ಪುರುಷ 1289 ಮಹಿಳಾ ಸದಸ್ಯರು ಸೇರಿದಂತೆ ಒಟ್ಟು 2492 ಮಂದಿ ಮತದಾರರು ತಮ್ಮ ಮತ ಚಲಾಯಿಸಿದ್ದಾರೆ.
ಬೆಳಗ್ಗೆ 8 ಗಂಟೆಗೆ ಆರಂಭಗೊಂಡ ಮತದಾನ ಪ್ರಕ್ರಿಯೆಯಲ್ಲಿ ಮತದಾರರು ಉತ್ಸಾಹದಿಂದ ಭಾಗವಹಿಸಿದ್ದು, 10 ಗಂಟೆಯ ವೇಳೆಗೆ ಜಿಲ್ಲೆಯಲ್ಲಿ ಒಟ್ಟು 43.91 % ಮತದಾನ ನಡೆದಿದ್ದು, 2505 ಮಂದಿ ಮತದಾರರಲ್ಲಿ 1100 ಮಂದಿ ಮತದಾನ ಮಾಡಿದ್ದರು. ಕುಂದಾಪುರ ತಾಲೂಕಿನ ಆಲೂರು, ಚಿತ್ತೂರು, 74 ಉಳ್ಳೂರು, ಹಾರ್ದಳ್ಳಿ-ಮಂಡಳ್ಳಿ. ಬ್ರಹ್ಮಾವರ ತಾಲೂಕಿನ ಕೋಟತಟ್ಟು,ಬಾರ್ಕೂರು. ಹೆಬ್ರಿ ತಾಲೂಕಿನ ಮಾಡಾಮಕ್ಕಿ,ನಾಡ್ಪಾಲು. ಕಾರ್ಕಳ ತಾಲೂಕಿನ ಎರ್ಲಪಾಡಿ, ಹಿರ್ಗಾನ, ಕೆರ್ವಾಶೆ, ದುರ್ಗಾ, ಪಳ್ಳಿ,ನಿಟ್ಟೆ, ನಲ್ಲೂರು, ರೆಂಜಾಳ, ಬೋಳ, ನಂದಳಿಕೆ, ಮುಂಡ್ಕೂರು ಗ್ರಾಮ ಪಂಚಾಯತ್ ಗಳಲ್ಲಿ ಎಲ್ಲಾ ಮತದಾರರು ಮತ ಚಲಾಯಿಸಿದ್ದು, 100% ಮತದಾನ ನಡೆದಿತ್ತು.
ಬೆಳಗ್ಗೆ 10 ಗಂಟೆಯ ನಂತರ ಮತದಾನ ಪ್ರಕ್ರಿಯೆ ಮತ್ತಷ್ಟು ಚುರುಕುಗೊಂಡಿದ್ದು, ಪಂಚಾಯತ್ ಗಳಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದರು. ಪೆರ್ಡೂರು ಗ್ರಾಮ ಪಂಚಾಯತ್ ನಲ್ಲಿ ಸದಸ್ಯರುಗಳು ಸರತಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. 12 ಗಂಟೆಯ ವೇಳೆಗೆ ಬೈಂದೂರುನ 9 , ಕುಂದಾಪುರದ 22 , ಬ್ರಹ್ಮಾವರದ 20 , ಉಡುಪಿಯ 10, ಕಾಪು ನ 12, ಹೆಬ್ರಿಯ 5 , ಕಾರ್ಕಳದ 12 ಗ್ರಾ,ಮ ಪಂಚಾಯತ್ ಗಳಲ್ಲಿ 100% ಮತದಾನ ನಡೆದಿತ್ತು. ಮಧ್ಯಾಹ್ಮ 2 ಗಂಟೆಯ ವೇಳೆಗೆ ಹೆಬ್ರಿ ತಾಲೂಕಿನಲ್ಲಿ 100% ಮತದಾನ ನಡೆದಿತ್ತು.
ಪರಿಷತ್ ಚುನಾವಣೆಗೆ ಜಿಲ್ಲೆಯಲ್ಲಿ 158 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಚುನಾವಣಾ ಆಯೋಗ ಸೂಚಿಸಿರುವ ಎಲ್ಲಾ ನಿರ್ದೇಶನಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಿ, ಮತದಾನ ಪ್ರಕ್ರಿಯೆ ನಡೆದಿದ್ದು, ಎಲ್ಲಾ ಮತಗಟ್ಟೆಗಳಲ್ಲಿ ವೀಡಿಯೋಗ್ರಫಿ ವ್ಯವಸ್ಥೆ ಮಾಡಲಾಗಿತ್ತು.