ನವದೆಹಲಿ: ದೆಹಲಿಯ ಮಾಜಿ ಸಚಿವ ಮತ್ತು ಆಪ್ ನಾಯಕ ಸತ್ಯೇಂದ್ರ ಜೈನ್ ಅವರ ಸಿಸಿಟಿವಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ತಿಹಾರ್ ಜೈಲಿನಲ್ಲಿ ಕಾಲಿಗೆ ಮಸಾಜ್ ತೆಗೆದುಕೊಳ್ಳುತ್ತಿದ್ದಾರೆ.
ವೈರಲ್ ಆಗಿರುವ ಈ ವೀಡಿಯೋದಲ್ಲಿ, ಜೈನ್ ತನ್ನ ಹಾಸಿಗೆಯ ಮೇಲೆ ಮಲಗಿ ಪೇಪರ್ಗಳನ್ನು ಓದುತ್ತಿದ್ದಾರೆ ಮತ್ತು ಅವರ ಪಕ್ಕದಲ್ಲಿ ಒಬ್ಬ ವ್ಯಕ್ತಿ ಅವರಿಗೆ ಫೂಟ್ ಮಸಾಜ್ ನೀಡುತ್ತಿದ್ದಾನೆ. ತಿಹಾರ್ ಜೈಲಿನಲ್ಲಿ ಸತ್ಯೇಂದ್ರ ಜೈನ್ ಕಾಲಿಗೆ ಮಸಾಜ್ ತೆಗೆದುಕೊಳ್ಳುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಯು ಈ ವರ್ಷದ ಸೆಪ್ಟೆಂಬರ್ 13ರದ್ದಾಗಿದೆ. ಎ ಬ್ಲಾಕ್ನ ಸೆಲ್ 1 ಕ್ಕೆ ಜೈನ್ ಬಂದಿರುವುದನ್ನು ಈ ದೃಶ್ಯಾವಳಿ ತೋರಿಸುತ್ತಿದೆ.
#WATCH | CCTV video emerges of jailed Delhi minister Satyendar Jain getting a massage inside Tihar jail. pic.twitter.com/VMi8175Gag
— ANI (@ANI) November 19, 2022
ಆದರೆ, ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸ್ಪಷ್ಟೀಕರಣ ನೀಡಿ ಅನಾರೋಗ್ಯ ಪೀಡಿತನ ಬಗ್ಗೆ ತಮಾಷೆ ಮಾಡಿರುವುದಕ್ಕಾಗಿ ಬಿಜೆಪಿ ಮೇಲೆ ಕಿಡಿಕಾರಿದ್ದಾರೆ. ಜೈನ್ ಎರಡು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಮತ್ತು ಅವರ ವೈದ್ಯರು ಫಿಸಿಯೋಥೆರಪಿಯನ್ನು ಶಿಫಾರಸು ಮಾಡಿದ್ದಾರೆ ಎಂದು ಸಿಸೋಡಿಯಾ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಭ್ರಷ್ಟಾಚಾರ ತಡೆ ಕಾಯ್ದೆಯಡಿ 2017 ರಲ್ಲಿ ಜೈನ್ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದ ಆಧಾರದ ಮೇಲೆ ಫೆಡರಲ್ ಏಜೆನ್ಸಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿತ್ತು. ಜೈನ್ ಅವರ ಜೊತೆ ನಂಟು ಹೊಂದಿರುವ ನಾಲ್ಕು ಕಂಪನಿಗಳ ಮೂಲಕ ಹಣ ಲಪಟಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಏತನ್ಮಧ್ಯೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎಎಪಿ ನಾಯಕ ಸತ್ಯೇಂದ್ರ ಜೈನ್, ವೈಭವ್ ಜೈನ್ ಮತ್ತು ಅಂಕುಶ್ ಜೈನ್ ಈ ಮೂವರಿಗೂ ದೆಹಲಿ ನ್ಯಾಯಾಲಯ ಗುರುವಾರ (ನವೆಂಬರ್ 17) ಜಾಮೀನು ನಿರಾಕರಿಸಿದೆ.