ಬೆಂಗಳೂರು: ಕೊರೊನಾ ಸೋಂಕಿನ ಹರಡುವಿಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಈ ನಡುವೆ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಫೇಕ್ ಸುದ್ದಿಗಳನ್ನು ಹರಿಬಿಟ್ಟು ಜನರನ್ನು ಇನ್ನಷ್ಟು ಆತಂಕಕ್ಕೆ ದೂಡುತ್ತಿರುವ ಸಂಗತಿಗಳು ಬೆಳಕಿಗೆ ಬಂದಿದೆ.
ಆಸ್ಪತ್ರೆಯೊಂದರಲ್ಲಿ ದುಡ್ಡಿಗಾಗಿ ರೋಗಿಯ ಕತ್ತುಹಿಸುಕು ಸಾಯಿಸಿದ್ದಾರೆ ಎನ್ನಲಾದ ವಿಡಿಯೋ, ಮತ್ತೊಂದು ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ರೋಗಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ವಿಡಿಯೋ ತುಣುಕು ಜೊತೆಗೆ ಯುವತಿಯೊಬ್ಬಳು ತನ್ನ ತಂದೆಯನ್ನು ಕಳೆದುಕೊಂಡು ಅಳಲುತ್ತಿದ್ದ ವಿಡಿಯೋವನ್ನು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇದೀಗ ಅದು ವೈರಲ್ ಆಗಿದೆ.
ಇದರಲ್ಲಿ ನಿಜ ಯಾವುದು, ಸುಳ್ಳು ಯಾವುದು ಎಂಬ ಬಗ್ಗೆ ಜನರಿಗೆ ಗೊಂದಲ ಉಂಟಾಗಿದೆ. ಈ ಬಗ್ಗೆ ಖಾಸಗಿ ಮಾಧ್ಯಮ ವರದಿಯೊಂದನ್ನು ಪ್ರಕಟಿಸಿದೆ.
ಕರ್ನಾಟಕ ಪೊಲೀಸ್ ಇಲಾಖೆ ಕೂಡ ತನ್ನ ವೆಬ್ಸೈಟ್ನಲ್ಲಿ ಫ್ಯಾಕ್ಟ್ ಚೆಕ್ ಮಾಡಿ, ಇಂಥ ವದಂತಿಗಳನ್ನ ನಂಬಿ ಯಾಮಾರಬೇಡಿ ಎಂದು ಎಚ್ಚರಿಕೆ ನೀಡಿದೆ.
ಈ ವಿಡಿಯೋದಲ್ಲಿರೋ ಎರಡು ದೃಶ್ಯಗಳು ಕರ್ನಾಟಕದ್ದಲ್ಲ. ಮೂರು ಬೇರೆ ಬೇರೆ ವಿಡಿಯೋಗಳನ್ನ ಸೇರಿಸಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ವ್ಯಕ್ತಿಯೊಬ್ಬ ರೋಗಿಯ ಕತ್ತುಹಿಸುಕುತ್ತಿರೋ ವಿಡಿಯೋ ಬಾಂಗ್ಲಾದೇಶದ್ದಾಗಿದ್ದು, 2020ರ ಮೇ 19ರಂದು ಯೂಟ್ಯೂಬ್ನಲ್ಲಿ ಅಪ್ಲೋಡ್ ಆಗಿತ್ತು. ಅದ್ರಲ್ಲಿರೋ ವ್ಯಕ್ತಿ ಕೊರೊನಾ ರೋಗಿಯಲ್ಲ.
ಮತ್ತೊಂದು ವಿಡಿಯೋ ಪಟಿಯಾಲಾದ್ದು. ಖಾಸಗಿ ಆಸ್ಪತ್ರೆ ಸಿಬ್ಬಂದಿ, ಖಿನ್ನತೆಗೆ ಒಳಗಾಗಿದ್ದ ರೋಗಿಯನ್ನು ನಿಯಂತ್ರಿಸುತ್ತಿರೋ ದೃಶ್ಯ ಆಗಿದೆ. ಈ ಘಟನೆ ಸಂಬಂಧ ಅಲ್ಲಿನ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ತಂದೆಯನ್ನು ಕಳೆದುಕೊಂಡ ಯುವತಿಯೊಬ್ಬಳು ಅಳುತ್ತಿರುವ ದೃಶ್ಯ ಬೆಂಗಳೂರಿನ ಆಕ್ಸ್ಫರ್ಡ್ ಆಸ್ಪತ್ರೆಯದ್ದಾಗಿದೆ. ಇದನ್ನು ಕನ್ನಡದ ನ್ಯೂಸ್ಫಸ್ಟ್ ಚಾನೆಲ್ ವರದಿ ಮಾಡಿದ್ದು, ಮೇಲಿನ ಎರಡು ವಿಡಿಯೋಗಳಿಗೆ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಾಬೀತಾಗಿದೆ.
ಅಪ್ ಲೋಡ್ ಮಾಡಿದ್ದು ಯಾರು.?
Mahanayak_kannada ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಫೇಕ್ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಈ ಬಗ್ಗೆ ಸ್ವತಃ ಅಪ್ ಲೋಡ್ ಮಾಡಿದ ಯುವಕನೇ ಕ್ಷಮೆ ಯಾಚಿಸಿದ್ದಾನೆ. ನಾನು ವಿಡಿಯೋ ಹಾಕುವ ಮುನ್ನ ಪರಿಶೀಲಿಸದೇ ಅಪ್ಲೋಡ್ ಮಾಡಿದ್ದರಿಂದ ಕ್ಷಮೆ ಯಾಚಿಸುತ್ತೇನೆ.
ರೋಗಿಯನ್ನ ಸಾಯಿಸಲು ಯತ್ನಿಸುತ್ತಿರುವ ವಿಡಿಯೋಗೂ, ತನ್ನ ತಂದೆಯನ್ನ ಕಳೆದುಕೊಂಡು ದುಃಖದಲ್ಲಿರೋ ಮಹಿಳೆಗೂ ಸಂಬಂಧವಿಲ್ಲ. ಸತ್ಯ ಗೊತ್ತಾದ ನಂತರ ಆ ವಿಡಿಯೋವನ್ನ ನಾನು ಡಿಲೀಟ್ ಮಾಡಿದ್ದೇನೆ. ಯಾರೂ ಆ ವಿಡಿಯೋ ಶೇರ್ ಮಾಡಬೇಡಿ ಎಂದು ಯುವಕ ಕೇಳಿಕೊಂಡಿರೋದಾಗಿ ಕರ್ನಾಟಕ ಪೊಲೀಸ್ ವೆಬ್ಸೈಟ್ನಲ್ಲಿ ತಿಳಿಸಿದೆ. ಆದ್ದರಿಂದ ಜನರು ಇಂಥ ಸುಳ್ಳು ವದಂತಿಗಳಿಂದ ಕೂಡಿದ ಸುದ್ದಿಗಳನ್ನು ನಂಬಬೇಡಿ ಎಂದು ಹೇಳಿದೆ.












