ಸ್ಪೈಕರ್ಸ್ ತಂಡದ ವತಿಯಿಂದ ಹಿರಿಯ ಕ್ರೀಡಾಪಟು ಪಾಂಗಾಳ ವಾಸುದೇವ ನಾಯಕ್ ಅವರಿಗೆ ಸನ್ಮಾನ

ಉಡುಪಿ: ಕ್ರೀಡಾ ಮನೋಭಾವ, ಶಿಸ್ತು, ಸಮರ್ಪಣೆ ಮತ್ತು ಯುವ ಪ್ರತಿಭೆಗಳನ್ನು ರೂಪಿಸುವ ಅಪೂರ್ವ ಸಾಮರ್ಥ್ಯದ ಮೂಲಕ ಉಡುಪಿ ಜಿಲ್ಲೆಯ ವಾಲಿಬಾಲ್ ಕ್ರೀಡೆಗೆ ಭದ್ರ ಅಡಿಪಾಯ ಹಾಕಿದ ಹಿರಿಯ ಕ್ರೀಡಾಪಟು ಹಾಗೂ ತರಬೇತುದಾರ ಪಾಂಗಾಳ ವಾಸುದೇವ ನಾಯಕ್ (ಬಾಬಣ್ಣ) ಅವರನ್ನು ಉಡುಪಿ ರೆಸಿಡೆನ್ಸಿ ಸಭಾಂಗಣದಲ್ಲಿ ಸ್ಪೈಕರ್ಸ್ ತಂಡದ ವತಿಯಿಂದ ಭಾನುವಾರ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಅತಿಥಿಗಳು, ಬಾಬಣ್ಣ ಅವರು ಕೇವಲ ತರಬೇತುದಾರರಲ್ಲ, ಸಾವಿರಾರು ಕ್ರೀಡಾಪಟುಗಳ ಬದುಕಿಗೆ ದಿಕ್ಕು ತೋರಿದ ಮಾರ್ಗದರ್ಶಕರಾಗಿದ್ದಾರೆ ಎಂದು ಶ್ಲಾಘಿಸಿದರು. ಉಡುಪಿ ಜಿಲ್ಲೆಯ ವಾಲಿಬಾಲ್ ಕ್ರೀಡೆಯ ಬೆಳವಣಿಗೆಯಲ್ಲಿ ಅವರ ಕೊಡುಗೆ ಅನನ್ಯವಾಗಿದ್ದು, ಅನೇಕ ಪ್ರತಿಭಾವಂತ ಆಟಗಾರರು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಅವರ ಮಾರ್ಗದರ್ಶನವೇ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಉದ್ಯಮಿ ಸಂತೋಷ್ ಶೆಟ್ಟಿ ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿ, ಬಾಬಣ್ಣ ಅವರು ಸ್ಥಾಪಿಸಿದ ಸ್ಪೈಕರ್ಸ್ ತಂಡವು ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ. ಯುವಜನರಲ್ಲಿ ಕ್ರೀಡಾಸಕ್ತಿ ಬೆಳೆಸುವಲ್ಲಿ ಅವರ ಪಾತ್ರ ಸದಾ ಸ್ಮರಣೀಯ ಎಂದು ಹೇಳಿದರು.

ಅಭಿನಂದನಾ ಪತ್ರವನ್ನು ನಯನ ಗಣೇಶ್ ವಾಚಿಸಿದರು. ಕಾರ್ಯಕ್ರಮದಲ್ಲಿ ವಿಜಯ್ ಹೆಗ್ಡೆ, ಸತ್ಯಜಿತ್ ಶೆಟ್ಟಿ, ಜಿನರಾಜ್ ಎರ್ಮಾಳ್, ಶರತ್ ಕುಮಾರ್ ಸೇರಿದಂತೆ ಹಲವರು ಬಾಬಣ್ಣ ಅವರ ಕ್ರೀಡಾ ಸಾಧನೆಗಳು ಹಾಗೂ ವ್ಯಕ್ತಿತ್ವವನ್ನು ಸ್ಮರಿಸಿ ಗೌರವ ನುಡಿಗಳನ್ನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪಾಂಗಾಳ ವಾಸುದೇವ ನಾಯಕ್, ಕ್ರೀಡೆಯು ವ್ಯಕ್ತಿತ್ವ ವಿಕಸನಕ್ಕೆ ಅತ್ಯುತ್ತಮ ಮಾಧ್ಯಮವಾಗಿದೆ. ತಮಗೆ ದೊರೆತಿರುವ ಈ ಗೌರವವು ಇನ್ನಷ್ಟು ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಲು ಪ್ರೇರಣೆ ನೀಡಿದೆ ಎಂದು ಹೇಳಿದರು. ಕ್ರೀಡಾ ಕ್ಷೇತ್ರದಲ್ಲಿ ತಮಗೆ ಬೆಂಬಲ ನೀಡಿದ ಸಹ ಆಟಗಾರರು, ವಿದ್ಯಾರ್ಥಿಗಳು ಹಾಗೂ ಸ್ನೇಹಿತರನ್ನು ಅವರು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಪಾಂಗಾಳ ವಾಸುದೇವ ನಾಯಕ್ ಹಾಗೂ ನಂದಿನಿ ದಂಪತಿಯನ್ನು ಗೌರವಿಸಲಾಯಿತು.

ದೈಹಿಕ ಶಿಕ್ಷಣ ಶಿಕ್ಷಕ ಅರುಣ್ ಶೆಟ್ಟಿ ವಂದಿಸಿದರು. ವಿನೋದ್ ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಕುರ್ಕಾಲು ವಾಲಿಬಾಲ್ ತಂಡ, ಬೈಲೂರು ಮಿತ್ರಮಂಡಳಿ, ಕುಂದಾಪುರ ವಾಲಿಬಾಲ್ ತಂಡ ಹಾಗೂ ಸ್ಪೈಕರ್ಸ್ ತಂಡದ ಸದಸ್ಯರು, ಹಳೆಯ ವಿದ್ಯಾರ್ಥಿಗಳು, ಕ್ರೀಡಾಪಟುಗಳು ಮತ್ತು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.