ಭಾರತೀಯ ಚಿತ್ರರಂಗದ ಹಿರಿಯ ನಟಿ ಹೇಮಾ ಚೌಧರಿ ಅವರು ಮೆದುಳಿನ ರಕ್ತಸ್ರಾವದಿಂದ (ಬ್ರೈನ್ ಹ್ಯಾಮರೇಜ್) ಬಳಲುತ್ತಿದ್ದು, ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಹೇಮಾ ಚೌಧರಿ ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ತಿಳಿದು ಬಂದಿದೆ. ಪುತ್ರ ಐರ್ಲ್ಯಾಂಡ್ನಲ್ಲಿದ್ದಾರೆ. ಕುಟುಂಬಸ್ಥರು ಮಗನ ಬರುವಿಕೆಗಾಗಿ ಕಾಯುತ್ತಿದ್ದಾರೆ.
ಎರಡು ದಿನಗಳ ಹಿಂದೆ ಬ್ರೈನ್ ಹ್ಯಾಮರೇಜ್ ಆಗಿದ್ದು, ತೀವ್ರ ನಿಗಾ ಘಟಕದಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ. ಹೇಮಾ ಚೌಧರಿ ದಕ್ಷಿಣ ಭಾರತ ಚಲನಚಿತ್ರರಂಗದ ಹೆಸರಾಂತ ಕಲಾವಿದೆ. ಕನ್ನಡ ಸೇರಿದಂತೆ ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಗಳು ಸೇರಿದಂತೆ ಸುಮಾರು 180ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹೆಸರಾಂತ ಕೂಚಿಪುಡಿ ಕಲಾವಿದೆಯೂ ಹೌದು.
ಕನ್ನಡ ಸಿನಿಮಾಗಳು ಮಾತ್ರವಲ್ಲದೇ ಧಾರವಾಹಿಗಳಲ್ಲೂ ನಟಿಸಿದ್ದರು. ಒಂದು ಕಾಲದಲ್ಲಿ ಕನ್ನಡ ಕಿರುತೆರೆ ವೀಕ್ಷಕರ ನೆಚ್ಚಿನ ಧಾರವಾಹಿ ಅಮೃತ ವರ್ಷಿಣಿಯಲ್ಲಿ ಶಕುಂತಲಾ ದೇವಿ ಎನ್ನುವ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.