ಬೆಂಗಳೂರು: ವಿಶ್ವದಲ್ಲೇ ಎಲ್ಲಿಯೂ ಗುರುತಿಸಲಾಗದ ಅತಿ ಅಪರೂಪದ ರಕ್ತದ ಗುಂಪೊಂದು ಕೋಲಾರ ಮೂಲದ ಮಹಿಳೆಯೊಬ್ಬರಲ್ಲಿ ಪತ್ತೆಯಾಗಿದೆ.
ಕೋಲಾರದ ಆಸ್ಪತ್ರೆಯಲ್ಲಿ 38 ವರ್ಷದ ಮಹಿಳೆಯೊಬ್ಬರು ಹೃದಯ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಮಹಿಳೆಯಲ್ಲಿ ಅತ್ಯಂತ ಅಪರೂಪದ O Rh+ ರಕ್ತದ ಗುಂಪು ಪತ್ತೆಯಾಗಿದೆ. ಶಸ್ತ್ರಚಿಕಿತ್ಸೆಗಾಗ ವೈದ್ಯರು ಆಕೆಯ ರಕ್ತಕ್ಕೆ ಹೊಂದಿಕೆಯಾಗುವ ರಕ್ತಕ್ಕಾಗಿ ಹುಡುಕಾಟ ಆರಂಭಿಸಿದ್ದರು. O-ಪಾಸಿಟಿವ್ ರಕ್ತ ಸೇರಿದಂತೆ ಯಾವುದೇ ರಕ್ತದ ಗುಂಪಿಗೂ ಈಕೆಯ ರಕ್ತ ಹೊಂದಿಕೆಯಾಗಿಲ್ಲ.
ಬಳಿಕ ಆಸ್ಪತ್ರೆಯು ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರದಲ್ಲಿರುವ ಅಡ್ವಾನ್ಸ್ಡ್ ಇಮ್ಯುನೊಹೆಮಟಾಲಜಿ ರೆಫರೆನ್ಸ್ ಲ್ಯಾಬೋರೇಟರಿಗೆ ನೀಡಿತು.
ಸುಧಾರಿತ ಸೆರೋಲಾಜಿಕಲ್ ತಂತ್ರಗಳನ್ನು ಬಳಸಿಕೊಂಡು, ನಮ್ಮ ತಂಡವು ಮಹಿಳೆಯ ರಕ್ತವು ‘ಪ್ಯಾನ್ರಿಯಾಕ್ಟಿವ್’ ಎಂದು ಗುರ್ತಿಸಿದೆ. ಈಕೆಯ ರಕ್ತ ಮಾದರಿ ಯಾವುದೇ ರಕ್ತಕ್ಕೂ ಹೊಂದಿಕೆಯಾಗುವುದಿಲ್ಲ ಎಂದು ಪತ್ತೆ ಮಾಡಿದೆ. ಇದು ಅಪರೂಪದ ಪ್ರಕರಣ ಎಂದು ಗುರ್ತಿಸಲಾಗಿದೆ.
ಮಹಿಳೆಯ ರಕ್ತಕ್ಕೆ ಹೊಂದಿಕೆಗಾಗಿ ಆಕೆಯ ಕುಟುಂಬದ 20 ಸದಸ್ಯರ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಯಿತು. ಆದರೆ, ಯಾವುದೇ ರಕ್ತಕ್ಕೂ ಹೊಂದಿಕೆಯಾಗಲಿಲ್ಲ. ಬಳಿಕ ಪ್ರಕರಣವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಲಾಯಿತು. ಕುಟುಂಬದ ಸಹಯೋಗದ ಪ್ರಯತ್ನದಿಂದ ರಕ್ತ ವರ್ಗಾವಣೆಯ ಅಗತ್ಯವಿಲ್ಲದೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು ಎಂದು ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರದ ವೈದ್ಯ ಅಂಕಿತ್ ಮಾಥುರ್ ಅವರು ಹೇಳಿದ್ದಾರೆ.
ಏತನ್ಮಧ್ಯೆ, ಮಹಿಳೆ ಮತ್ತು ಆಕೆಯ ಕುಟುಂಬದ ರಕ್ತದ ಮಾದರಿಗಳನ್ನು ಬ್ರಿಟನ್’ನ ಬ್ರಿಸ್ಟಲ್‌ನಲ್ಲಿರುವ ಅಂತರರಾಷ್ಟ್ರೀಯ ರಕ್ತ ಗುಂಪು ಪ್ರಯೋಗಾಲಯಕ್ಕೆ (ಐಬಿಜಿಆರ್‌ಎಲ್) ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಹತ್ತು ತಿಂಗಳ ವ್ಯಾಪಕ ಸಂಶೋಧನೆ ಮತ್ತು ಆಣ್ವಿಕ ಪರೀಕ್ಷೆಯ ಪರಿಣಾಮವಾಗಿ ತಿಳಿದಿಲ್ಲದ ರಕ್ತದ ಗುಂಪಿನ ಪ್ರತಿಜನಕವನ್ನು ಪತ್ತೆ ಮಾಡಲಾಗಿದೆ ಎಂದು ಡಾ. ಮಾಥುರ್ ಅವರು ತಿಳಿಸಿದ್ದಾರೆ.
CRIB ರಕ್ತ ಗುಂಪು ವ್ಯವಸ್ಥೆಯ ಭಾಗವಾಗಿದ್ದು, ಇದರ ಮೂಲವನ್ನು ಗುರುತಿಸಿ ಅಧಿಕೃತವಾಗಿ CRIB ಎಂದು ಹೆಸರಿಸಲಾಗಿದೆ.
CRIB ಪ್ರತಿಜನಕ ಗುರುತಿಸಲ್ಪಟ್ಟ ವಿಶ್ವದ ಮೊದಲ ವ್ಯಕ್ತಿ ಮಹಿಳೆ:
‘CR’ ಎಂದರೆ ‘ಕ್ರೋಮರ್’ ಮತ್ತು ‘IB’ ಎಂದರೆ ‘ಭಾರತ’, ‘ಬೆಂಗಳೂರು’. ಜೂನ್ 2025 ರಲ್ಲಿ ಇಟಲಿಯ ಮಿಲನ್‌ನಲ್ಲಿ ನಡೆದ ಅಂತರರಾಷ್ಟ್ರೀಯ ರಕ್ತ ವರ್ಗಾವಣೆ ಸೊಸೈಟಿ (ISBT) ಯ 35 ನೇ ಪ್ರಾದೇಶಿಕ ಕಾಂಗ್ರೆಸ್‌ನಲ್ಲಿ ಈ ಐತಿಹಾಸಿಕ ಘೋಷಣೆಯನ್ನು ಮಾಡಲಾಯಿತು. CRIB ಪ್ರತಿಜನಕದೊಂದಿಗೆ ಗುರುತಿಸಲ್ಪಟ್ಟ ವಿಶ್ವದ ಮೊದಲ ವ್ಯಕ್ತಿ ಮಹಿಳೆ ಎಂದು ಗುರುತಿಸಲಾಗಿದೆ ಎಂದು ಡಾ. ಮಾಥುರ್ ಹೇಳಿದ್ದಾರೆ.
ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರವು ಕರ್ನಾಟಕ ರಾಜ್ಯ ರಕ್ತ ವರ್ಗಾವಣೆ, ಮುಂಬೈನಲ್ಲಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಅಂತರರಾಷ್ಟ್ರೀಯ ರಕ್ತ ವರ್ಗಾವಣೆ ಸೊಸೈಟಿಯ ತಾಂತ್ರಿಕ ಬೆಂಬಲದೊಂದಿಗೆ ಸ್ವಯಂಪ್ರೇರಿತ ರಕ್ತದಾನಿಗಳ ಅಪರೂಪದ ದಾನಿಗಳ ನೋಂದಣಿಯನ್ನು ಪ್ರಾರಂಭಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಹಲವಾರು ಇತರ ಅಪರೂಪದ ರಕ್ತದ ಪ್ರಕಾರದ ರೋಗಿಗಳನ್ನು ಗುರುತಿಸುವಲ್ಲಿ ಮತ್ತು ಅವರಿಗೆ ಸೂಕ್ತ ರಕ್ತ ವರ್ಗಾವಣೆ ಬೆಂಬಲವನ್ನು ಒದಗಿಸುವಲ್ಲಿ ನಾವು ಪ್ರಮುಖ ಪಾತ್ರ ವಹಿಸಿದ್ದೇವೆ. ಈ ಪ್ರಕರಣಗಳನ್ನು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಕಟಿಸಲಾಗಿದೆ ಮತ್ತು ಪ್ರಸ್ತುತಪಡಿಸಲಾಗಿದೆ (ಉದಾ: D- -, Rh null, In b negative ಇತ್ಯಾದಿ) ಎಂದು ವೈದ್ಯ ಮಾಥುರ್ ಅವರು ತಿಳಿಸಿದ್ದಾರೆ.












