ಉಡುಪಿ: ಕಳೆದ ಹಲವು ದಿನಗಳಿಂದ ಉತ್ತರ ಭಾರತ ಮತ್ತು ಇದೀಗ ಮುಂಬೈನಲ್ಲಿ ಅಬ್ಬರ ತೋರಿರುವ ಮುಂಗಾರು ಮಳೆಯು ಮತ್ತೊಮ್ಮೆ ಕರ್ನಾಟಕದತ್ತ ಮುಖ ಮಾಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮುಂದಿನ ಐದು ದಿನಗಳಲ್ಲಿ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಲಘುವಿನಿಂದ ಮಧ್ಯಮ ಮಳೆಯಾಗುವ ಮುನ್ಸೂಚನೆಯನ್ನು ಇಲಾಖೆಯು ನೀಡಿದೆ.
ರಾಜ್ಯದಾದ್ಯಂತ ಬೀಳಲಿರುವ ಭಾರೀ ಮಳೆಯ (64.5 ಮಿಮೀ-115.5 ಮಿಮೀ) ಜೊತೆಗೆ ಕರಾವಳಿ ಕರ್ನಾಟಕದಲ್ಲಿ ಸೋಮವಾರ (ಜುಲೈ 24) ವರೆಗೆ ಅತಿ ಹೆಚ್ಚು (115.6 ಮಿಮೀ-204.5 ಮಿಮೀ) ಮಳೆಯಾಗುವ ಸಾಧ್ಯತೆಯಿದೆ. ಭಾನುವಾರ (ಜುಲೈ 23) ರವರೆಗೆ ಲಘು ಮಳೆ ಮತ್ತು ಮೋಡಗಳು ಬೆಂಗಳೂರಿನ ಆಕಾಶವನ್ನು ಅಲಂಕರಿಸಲಿವೆ ಎಂದು ಇಲಾಖೆ ತಿಳಿಸಿದೆ.
ಗುರುವಾರ ಉತ್ತರ ಒಳಭಾಗ ಮತ್ತು ಕರಾವಳಿ ಕರ್ನಾಟಕವನ್ನು ಆರೆಂಜ್ ಅಲರ್ಟ್ನಲ್ಲಿ ಇರಿಸಲಾಗಿದ್ದು ಸನ್ನದ್ದರಾಗಿರುವಂತೆ ತಿಳಿಸಲಾಗಿದೆ. ಗುರುವಾರ ಮತ್ತು ಸೋಮವಾರ ಬೆಳಗಾವಿ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಮತ್ತು ಶುಕ್ರವಾರ ಉತ್ತರ ಕನ್ನಡ ಮತ್ತು ಉಡುಪಿಗೆ ಜಿಲ್ಲಾ ಮಟ್ಟದ ಆರೆಂಜ್ ಅಲರ್ಟ್ಗಳನ್ನು ನಿಯೋಜಿಸಲಾಗಿದೆ.