ನವದೆಹಲಿ: ಜೀವನದಲ್ಲಿ ಒಮ್ಮೆಯಾದರೂ ತೀರ್ಥಯಾತ್ರೆ ಕೈಗೊಳ್ಳಬೇಕು, ದೇಶದ ದೇವಸ್ಥಾನಗಳನ್ನೆಲ್ಲಾ ನೋಡಿ ಕೃತಾರ್ಥರಾಗಬೇಕು ಎಂದು ಬಯಸುವ ಅದೆಷ್ಟೋ ಆಸ್ತಿಕರಿಗೆ ಸಮಯದ ಅಭಾವ, ಆರ್ಥಿಕತೆಯ ಕೊರತೆ ಮತ್ತು ದೈಹಿಕ ಸಮಸ್ಯೆಗಳಿಂದಾಗಿ ತೀರ್ಥಯಾತ್ರೆ ಕೈಗೊಳ್ಳುವುದು ಕನಸಾಗಿಯೇ ಉಳಿಯುತ್ತದೆ. ಇಂತಹ ಸದ್ಭಕ್ತರಿಗಾಗಿಯೆ ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯವು ಒಂದು ಅತ್ಯಪೂರ್ವವಾದ ಉಡುಗೊರೆಯನ್ನು ನೀಡಿದೆ. ಅಂದೆಂದರೆ, ಮಂದಿರ 360(ಟೆಂಪಲ್ 360).
ಏನಿದು ಟೆಂಪಲ್ 360?
ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದ ವೈಬ್ ಸೈಟ್ https://temple360.in ಭಾರತದ ತೀರ್ಥಯಾತ್ರಾರ್ಥಿಗಳಿಗೆ ಎಲ್ಲ ದೇವಸ್ಥಾನಗಳಿಗೆ ವರ್ಚುವಲ್ ಪ್ರವಾಸವನ್ನು ಏರ್ಪಡಿಸಿದೆ. ಬಸ್ಸು, ರೈಲು ವಿಮಾನ, ಉಳಕೊಳ್ಳುವ ವ್ಯವಸ್ಥೆ, ನೂಕು ನುಗ್ಗಲು ಯಾವ ಜಂಜಾಟವೂ ಇಲ್ಲ. ಮನೆಯಲ್ಲಿ ಕುಳಿತೇ ದೇಶದ ಪ್ರಸಿದ್ದ ದೇವಸ್ಥಾನಗಳ ನೇರ ದರ್ಶನ ಭಾಗ್ಯ. ಆರತಿ, ಪ್ರಸಾದ ಅರ್ಪಿಸುವ ಅವಕಾಶ. ಅಧ್ಯಾತ್ಮಿಕತೆಯೆಡೆಗಿನ ಪಯಣಕ್ಕೆ ಸುಲಭ ವಿಧಾನ ಈ 360 ಡಿಗ್ರಿ ಮಂದಿರ ದರ್ಶನ.
ವೀಕ್ಷಣೆ ಹೇಗೆ?
https://temple360.in ಅನ್ನು ತೆರೆಯಿರಿ. ಪುಟ ತೆರೆದ ಕೂಡಲೇ ಭಾರತದ ಪ್ರಸಿದ್ದ ದೇವಾಲಯಗಳ ಮಾಹಿತಿ ಅಲ್ಲಿ ಕಾಣಿಸಿಕೊಳ್ಳುತ್ತದೆ. ಯಾವ ದೇವರ ದರ್ಶನ ಪಡೆಯಬೇಕೋ ಆ ದೇವಸ್ಥಾನಕ್ಕೆ ಕ್ಲಿಕ್ ಮಾಡಿ, ನೇರ ಪ್ರಸಾರದಲ್ಲಿ ದೇವರ ಪೂಜೆ, ಆರತಿ ಇತ್ಯಾದಿಗಳನ್ನು ವೀಕ್ಷಿಸಿ. ಆನ್ಲೈನ್ ನಲ್ಲಿ ದಾನ, ಪ್ರಸಾದ, ಕೊಠಡಿ ಮುಂತಾದವುಗಳನ್ನು ಇ-ಬುಕ್ಕಿಂಗ್ ಮಾಡುವ ಸೌಲಭ್ಯವೂ ಇಲ್ಲಿದೆ. ಅದಾಗಲೇ 3067387 ಜನರು ಈ ವೆಬ್ ಸೈಟ್ ಗೆ ಭೇಟಿ ನೀಡಿ ಮಂದಿರ ವೀಕ್ಷಣೆಗಳನ್ನು ಕೈಗೊಂಡಿದ್ದಾರೆ.
ಭಾರತ ಸರಕಾರದ ಈ ಯೋಜನೆಯ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತೆ ಸಂಸ್ಕೃತಿ ಸಚಿವಾಲಯವು ತಿಳಿಸಿದೆ.