ಸಂಸತ್ ಕಲಾಪದಲ್ಲಿ ಮಹಿಳಾ ಮೀಸಲಾತಿ ಮಂಡನೆ ಸ್ವಾಗತಾರ್ಹ: ವೆರೋನಿಕಾ ಕರ್ನೆಲಿಯೋ

ಉಡುಪಿ: ಭಾರತದ ಹೊಸ ಸಂಸತ್ ನಲ್ಲಿ ಕಲಾಪದ ಮೊದಲ ದಿನವಾದ ಮಂಗಳವಾರ ಮಹಿಳಾ ಮೀಸಲಾತಿ ಮಸೂದೆ ಮಂಡನೆ ಆಗಿರುವುದು ಸ್ವಾಗತಾರ್ಹ ಸಂಗತಿ ಎಂದು ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ ಹೇಳಿದ್ದಾರೆ.

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ಮಸೂದೆ ಕಡೆಗೂ ಮಂಡನೆಯಾಗಿದ್ದು, ಇದರಿಂದ ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚು ಶಕ್ತಿ ಬಂದಂತಾಗಿದೆ ಎಂದಿದ್ದಾರೆ.
ಕಳೆದ 27 ವರ್ಷಗಳಲ್ಲಿ ಹಲವಾರು ಬಾರಿ ಮಸೂದೆಯನ್ನು ಮಂಡಿಸಲಾಗಿತ್ತು, ಆದರೆ ಪದೇ ಪದೇ ಅದಕ್ಕೆ ತಡೆಯೊಡ್ಡಲಾಗಿತ್ತು. ಮಹಿಳಾ ಮೀಸಲಾತಿ ಮಸೂದೆಗೆ ಶ್ರಮಿಸಿದ ಈ ಹಿಂದಿನ ಎಲ್ಲಾ ಸರಕಾರಗಳ ಪ್ರಯತ್ನದಿಂದಾಗಿ ಇದೀಗ ಸಂಸತ್ ಕಲಾಪದಲ್ಲಿ ಮಸೂದೆಯನ್ನು ಮಂಡಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಮಹಿಳಾ ಪ್ರತಿನಿಧಿಗಳು ಲೋಕಸಭೆ, ವಿಧಾನಸಭೆಗೆ ಆಯ್ಕೆಯಾಗಲು ಎಲ್ಲ ಪಕ್ಷಗಳ ಸಹಕಾರ ಅಗತ್ಯ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.