ಮತ್ತೊಮ್ಮೆ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಏರಿಸುವುದರ ಮೂಲಕ ಗೃಹಿಣಿಯರ ಕಣ್ಣಲ್ಲಿ ನೀರು ತರಿಸುವಂತಹ ಪಾಪದ ಕೆಲಸವನ್ನು ನರೇಂದ್ರ ಮೋದಿ ನೇತೃತ್ವದ ಸರಕಾರ ಮಾಡಿದೆ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋದಿಯವರ ಅಚ್ಚೇ ದಿನದ ಪರಿಣಾಮ ಗೃಹಬಳಕೆಯ ಸಿಲಿಂಡರ್ ಬೆಲೆ ಸಾವಿರದ ಗಡಿ ದಾಟಿ ಹೋಗಿದೆ. ಈಗ ಮತ್ತೊಮ್ಮೆ 50 ರೂ ಹೆಚ್ಚಳ ಮಾಡುವುದರ ಮೂಲಕ ಚುನಾವಣೆಯ ಸಮಯದಲ್ಲಿ ಮತ್ತೆ ರೂ 25 ಕಡಿಮೆ ಮಾಡುವ ನಾಟಕ ಮಾಡುತ್ತಾರೆ.
ಕೇಂದ್ರದ ಉಜ್ವಲಾ ಯೋಜನೆಯ ಮೂಲಕ ಗ್ಯಾಸ್ ಸಂಪರ್ಕ ಪಡೆದಿದ್ದ ಬಡಪಾಯಿ ಬಡವರು ಅದರಲ್ಲೂ ಕೂಲಿ ಕಾರ್ಮಿಕ, ಬಡ ಹಾಗೂ ಮಾಧ್ಯಮ ವರ್ಗದ ಮಹಿಳೆಯರು ಗ್ಯಾಸ್ ಬೆಲೆಯೇರಿಕೆಯ ಶಾಕ್ ಗೆ ತತ್ತರಿಸಿ ಹೋಗಿದ್ದಾರೆ. ಸೌದೆ ಬಿಟ್ಟು ಸಿಲಿಂಡರ್ ಮೊರೆ ಹೋಗಿದ್ದ ಮಹಿಳೆಯರಿಗೆ ದರ ಏರಿಕೆಯಿಂದ ಹಳೆ ಗಂಡನ ಪಾದವೇ ಗತಿ ಎಂಬಂತೆ ಸೌದೆಯೇ ಆಸರೆಯಾಗುತ್ತಿದೆ.
ಹಿಂದೆ ಯುಪಿಎ ಸರ್ಕಾರವಿದ್ದಾಗ ಗ್ಯಾಸ್ ಗೆ ಸಬ್ಸಿಡಿ ದೊರೆಯುತಿತ್ತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಏರಿಳಿತವಾದರೂ ಅದರ ಬಿಸಿ ಗ್ರಾಹಕರಿಗೆ ತಟ್ಟದಂತೆ ಯುಪಿಎ ಸರ್ಕಾರ ನೋಡಿಕೊಂಡಿತ್ತು. ಆದರೆ ಮೋದಿ ಸರ್ಕಾರ ಗ್ಯಾಸ್ ಮೇಲಿನ ಸಬ್ಸಿಡಿಯನ್ನು ಸುಳಿವೇ ಕೊಡದೆ ರದ್ದು ಮಾಡಿದೆ. ಬಡವರು ಬದುಕಬಾರದು ಬದಲಾಗಿ ಅದಾನಿ ಅಂಬಾನಿಯಂತಹ ಉದ್ಯಮಿಗಳು ಮಾತ್ರ ಬದುಕಬೇಕು ಎನ್ನುವುದು ಮೋದಿ ಸರ್ಕಾರದ ಉದ್ದೇಶವಾಗಿದೆ.
ಜತೆಗೆ ರಾಜ್ಯದಲ್ಲಿ ಜನರ ಗಮನವನ್ನು ಈ ಜ್ವಲಂತ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಭಾವನಾತ್ಮಕ ವಿಚಾರಗಳನ್ನು ಮುನ್ನಲೆಗೆ ತಂದು ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದೆ. ಕೂಡಲೇ ಕೇಂದ್ರ ಸರಕಾರ ಏರಿಕೆ ಮಾಡಿರುವ ಗ್ಯಾಸ್ ಬೆಲೆಯನ್ನು ಇಳಿಸುವಂತೆ ಅವರು ಆಗ್ರಹಿಸಿದ್ದಾರೆ.