ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಸುಳ್ಳು ಹೇಳುವುದೇ ಅಭ್ಯಾಸವಾಗಿದೆ: ವೆರೋನಿಕಾ ಕರ್ನೇಲಿಯೋ

ಉಡುಪಿ: ಕರಾವಳಿ ಜಿಲ್ಲೆಗಳ ಬಿಪಿಎಲ್ ಕಾರ್ಡ್ ದಾರರಿಗೆ ಕುಚ್ಚಲಕ್ಕಿ ಪೊರೈಕೆ ಮಾಡುವ ವಿಚಾರದಲ್ಲಿ ಸ್ಪಷ್ಟನೆ ನೀಡುವ ಭರದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಾದ ಕೋಟ ಶ್ರೀನಿವಾಸ ಪೂಜಾರಿ ಮತ್ತೊಂದು ಸುಳ್ಳು ಹೇಳುವುದರ ಮೂಲಕ ಸುಳ್ಳೇ ಇವರ ಮನೆ ದೇವರು ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ ಹೇಳಿದ್ದಾರೆ.

2021 ರ ಮೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ಕರೆದು ನವೆಂಬರ್ ಹೊತ್ತಿಗೆ ಕೆಂಪು ಕುಚ್ಚಲಕ್ಕಿ ಪೂರೈಸಲು ಸರ್ಕಾರದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದ್ದು ದಾಖಲೆಗಳಲ್ಲಿದೆ. ಬಳಿಕ ನವೆಂಬರ್ ತಿಂಗಳಿನಲ್ಲಿ 2022 ರ ಜನವರಿ ತಿಂಗಳಿನಲ್ಲಿ ಪೊರೈಸುವುದಾಗಿ ಹೇಳಿದ್ದರು ಆದರೆ ಪೊರೈಸದೆ ಸುಮ್ಮನೆ ಹೇಳಿಕೆಗಳಿಗೆ ಸೀಮಿತರಾಗಿದ್ದರು. ಸದಾ ದಾಖಲೆಗಳೊಂದಿಗೆ ಮಾತನಾಡುವ ಕೋಟ ಅವರಿಗೆ ಈ ದಾಖಲೆಗಳು ಮರೆತು ಹೋದವೇ?ಈಗ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಕೋಟ ಅವರು ಕುಚ್ಚಲಕ್ಕಿ ಪೊರೈಸುವುದರ ಒಳಗಡೆ ಸರಕಾರದ ಅವಧಿ ಮುಗಿದು ಹೋಗಿದೆ ಎಂದು ಮಾಧ್ಯಮ ಹೇಳಿಕೆ ಬಿಡುಗಡೆಗೊಳಿಸಿದ್ದು ಇದು ಮತ್ತೊಂದು ಹಸಿ ಹಸಿ ಸುಳ್ಳು ಎನ್ನುವುದು ಸಾಬೀತಾಗಿದೆ. 2021 ರಿಂದ 2023 ರ ಮಾರ್ಚ್ ವರೆಗೆ ಸುಮಾರು ಎರಡುವರೆ ವರ್ಷದ ಅವಧಿ ಬಿಜೆಪಿ ಸರಕಾರಕ್ಕೆ ಲಭಿಸಿದ್ದು ಈ ಅವಧಿಯಲ್ಲಿ ಯಾಕೆ ಇವರಿಗೆ ಕುಚ್ಚಲಕ್ಕಿ ಪೊರೈಕೆ ಮಾಡಲು ಸಾಧ್ಯವಾಗಿಲ್ಲ ಕೇವಲ ಪ್ರಚಾರಕ್ಕೆ ಈ ಹೇಳಿಕೆ ನೀಡಿ ಕರಾವಳಿಗರ ಕಿವಿಯ ಮೇಲೆ ಹೂ ಇಟ್ಟದ್ದು ಬಿಟ್ಟರೆ ಬೇರೆನೂ ಮಾಡಿಲ್ಲ.

ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ 6 ತಿಂಗಳ ಒಳಗಡೆ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ ಐದು ಗ್ಯಾರಂಟಿಗಳನ್ನು ಕೊಟ್ಟ ಮಾತಿನಂತೆ ಪೊರೈಸಲು ಸಾಧ್ಯವಾಗುವುದಾದರೆ ಕುಚ್ಚಲಕ್ಕಿ ಪೊರೈಕೆಗೆ ಎರಡುವರೆ ವರ್ಷ ಬೇಕಾಗುವುದೇ? ಜನಪರ ಯೋಜನೆ ನೀಡಲು ಇಚ್ಚಾಶಕ್ತಿ ಬೇಕೇ ಹೊರತು ಸುಮ್ಮನೆ ಬಾಯಿ ಚಪಲಕ್ಕೆ ಸುಳ್ಳು ಭರವಸೆ ನೀಡಿ ಕೋಟ ಜನರನ್ನು ಮರಳು ಮಾಡಲು ಪ್ರಯತಿಸಿದರೆ ಅದರಲ್ಲಿ ಸಫಲರಾಗಲ್ಲ.

ಸಮಾಜ ಕಲ್ಯಾಣ ಸಚಿವರ ನೆಲೆಯಲ್ಲಿ ಎಸ್ ಸಿ ಕುಟುಂಬಗಳಿಗೆ ಮನೆ ಕಟ್ಟಲು ಸರಕಾರದಿಂದ ರೂ 5 ಲಕ್ಷ ಒದಗಿಸುವುದಾಗಿ 2021 ರ ಅಗಸ್ಟ್ ತಿಂಗಳಿನಲ್ಲಿ ಹೇಳಿದ್ದು ಸುಳ್ಳೇ? ಘೋಷಣೆ ಮಾಡಿದ ಬಳಿಕ ಕನಿಷ್ಠ ಅದನ್ನು ಪೊರೈಸಲು ಸಾಧ್ಯವಾಗದೇ ಹೋದರೆ ಅಂತಹ ಸುಳ್ಳು ಘೋಷಣೆಗಳನ್ನು ಮಾಡುವುದರ ಹಿಂದುಳಿದ ವರ್ಗದ ಸಮುದಾಯದವರನ್ನು ವಂಚಿಸುವ ಕೆಲಸ ಮಾಡಿರುವುದು ಘೋರ ಅಪರಾಧ ಎನ್ನುವುದು ಕೋಟ ಅವರು ಮರೆತಿದ್ದಾರೆ.

ಗೋಪಾಲ ಪೂಜಾರಿಯವರು ರಾಜಕಾರಣದ ಮಿತಿ ಮೀರಿ ಮಾತನಾಡುತ್ತಿದ್ದು ಇದು ಆರೋಗ್ಯಕರ ರಾಜಕಾರಣಕ್ಕೆ ಯೋಗ್ಯವಾದಂತಹ ಮಾತುಗಳಲ್ಲ ಎಂದು ಹೇಳಿರುವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಬೈಂದೂರಿನ ವಿಧಾನಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗೋಪಾಲ ಪೂಜಾರಿಯವರನ್ನು ಭಯೋತ್ಪಾಧಕರಿಗೆ ಹೋಲಿಕೆ ಮಾಡಿ ಮಾತನಾಡುವಾಗ ಯಾಕೆ ತಿಳಿಯಲಿಲ್ಲ. ಕೋಟ ಶ್ರೀನಿವಾಸ ಪೂಜಾರಿಯವರ ಲೆಕ್ಕದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೆಲ್ಲರೂ ಭಯೋತ್ಪಾದಕರೇ? ಹಲವಾರು ವರ್ಷಗಳಿಂದ ರಾಜಕಾರದಲ್ಲಿರುವ ಕೋಟ ಅವರಿಗೆ ತಾನು ಬಳಸಿರುವುದು ಅಸಂಸದೀಯ ಪದ ಎನ್ನುವ ಕನಿಷ್ಠ ಜ್ಞಾನ ಇಲ್ಲವಾಯಿತೇ? ಈಗ ಕೋಟ ಅವರು ಲೋಕಸಭಾ ಅಭ್ಯರ್ಥಿಯಾಗಿದ್ದು ಗೋಪಾಲ ಪೂಜಾರಿಯವರು ಅಂದು ಅವರಿಗಾದ ನೋವನ್ನು ವ್ಯಕ್ತಪಡಿಸಿದ್ದಾರೆ ಹೊರತು ಯಾವುದೇ ಮಿತಿ ಮೀರಿದ ಮಾತನ್ನು ಆಡುತ್ತಿಲ್ಲ. ಬಿಜೆಪಿಯ ವಾಟ್ಸಾಪ್ ಯೂನಿವರ್ಸಿಟಿಗಳು ಅಂದು ಕೋಟ ಅವರ ಮಾತನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಗೋಪಾಲ ಪೂಜಾರಿಯವರ ತೇಜೊವಧೆ ಮಾಡುತ್ತಿದ್ದಾಗ ಕೋಟ ಶ್ರೀನಿವಾಸ ಪೂಜಾರಿಯವರು ಯಾಕೆ ಮೌನವಾಗಿದ್ದರು? ಒರ್ವ ಹಿರಿಯ ರಾಜಕಾರಣಿಯಾದ ಗೋಪಾಲ ಪೂಜಾರಿ ಅವರನ್ನು ಕೋಟ ಅವರು ಅಂತಹ ಅಸಂಸದೀಯ ಪದ ಬಳಸುವ ಮೊದಲು ನೂರು ಬಾರಿ ಯೋಚಿಸಬೇಕಾಗಿತ್ತು.

ವಿಧಾನಪರಿಷತ್ ಸದಸ್ಯರಾಗಿ, ಸಚಿವರಾಗಿ ಕೋಟ ಶ್ರೀನಿವಾಸ ಪೂಜಾರಿಯವರ ಸಾಧನೆ ಶೂನ್ಯ ಅದರಲ್ಲೂ ತನ್ನದೇ ಸ್ವಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಏನು ಇಲ್ಲ ಎನ್ನುವುದು ಉಡುಪಿ ಜಿಲ್ಲೆಯ ಜನರಿಗೆ ತಿಳಿದಿದೆ. ಚುನಾವಣೆಯಲ್ಲಿ ಜನರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೆ ತಾನು ಸುಳ್ಳು ಹೇಳೀದ್ದನ್ನು ಒಪ್ಪಿಕೊಳ್ಳಲಾಗದೆ ಇರುವ ಕೋಟ ಅವರಿಗೆ ಈ ಬಾರಿ ಜನರು ಸೂಕ್ತ ಪಾಠ ಕಲಿಸುವುದರ ಮೂಲಕ ನುಡಿದಂತೆ ನಡೆಯುವ ಉತ್ತಮ ಅಭ್ಯರ್ಥಿಯಾಗಿರುವ ಜಯಪ್ರಕಾಶ್ ಹೆಗ್ಡೆಯವರನ್ನು ಜನರ ಬೆಂಬಲಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.