ಮಂಗಳೂರು: ಸೋಮವಾರ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೀನುಗಾರರ ಬಾಕಿ ಇರುವ ಸಾಲವನ್ನು ಮನ್ನಾ ಮಾಡುವ ನಿರ್ಧಾರವನ್ನು ಕೈಗೊಂಡಿದ್ದಾರೆ.
ಮೀನುಗಾರರು ಹಾಗೂ ವಿಶೇಷವಾಗಿ ಮಹಿಳಾ ಮೀನುಗಾರರು, ಮೀನುಗಾರಿಕೆ ಚಟುವಟಿಕೆಗಳಾದ ಮೀನು ಮಾರಾಟ, ಪರಿಕರಣಗಳ ಖರೀದಿ, ಮೀನಿನ ವ್ಯಾಪಾರಕ್ಕಾಗಿ ಬಂಡವಾಳ, ಮೀನಿನ ಸಂರಕ್ಷಣೆ ಹಾಗೂ ಮೀನಿನ ಸಾಗಾಣಿಕೆ ಇತರೆ ಮೀನುಗಾರಿಕೆ ಸಂಬಂಧಿತ ಚಟುವಟಿಕೆಗಳನ್ನು ಕೈಗೊಳ್ಳಲು ಆರ್ಥಿಕ ನೆರವು ನೀಡುವ ದ್ರಷ್ಟಿಯಿಂದ ಶೇ ೨% ರಷ್ಟು ಬಡ್ಡಿ ದರದಲ್ಲಿ ವಾಣಿಜ್ಯ ಬ್ಯಾಂಕ್ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳಿಂದ ಸಾಲ ಪಡೆಯುವ ಯೋಜನೆಯನ್ನು ಮೀನುಗಾರಿಕೆ ಇಲಾಖೆಯು ಅನುಷ್ಠಾನ ಗೊಳಿಸಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ತಿಳಿಸಿದ್ದಾರೆ.
2017-18 ಮತ್ತು 2018-19 ನೇ ಸಾಲಿನಲ್ಲಿ ಕರಾವಳಿಯ 3 ಜಿಲ್ಲೆಗಳಲ್ಲಿ ಒಟ್ಟು 23507 ಮೀನುಗಾರರ ರೂಪಾಯಿ 60.584 ಕೋಟಿ ಸಾಲ ವಸೂಲಾತಿಗೆ ಬಾಕಿ ಇತ್ತು. ಹೀಗೆ ಒಟ್ಟು ಬಾಕಿ ಇರುವ ಸಾಲದ ಮೊತ್ತ 60.584 ಕೋಟಿಗಳನ್ನು ನೂತನ ಸಚಿವ ಸಂಪುಟ ಸಭೆಯಲ್ಲಿ ಸರಕಾರವೂ ಮನ್ನಾ ಮಾಡಿರುವುದರಿಂದ ಸುಮಾರು 23507 ಮೀನುಗಾರರು ಆರ್ಥಿಕ ಸಂಕಷ್ಟದಿಂದ ಹೊರಬಂದು ತಮ್ಮ ಜೀವನವನ್ನು ಸುಧಾರಿಸಿಕೊಂಡು ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಂತಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯ ಶಾಸಕರು ಉಡುಪಿ ಶಾಸಕ ರಘುಪತಿ ಭಟ್ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಈ ಪ್ರಸ್ತಾಪನೆಯನ್ನು ಸಚಿವ ಸಂಪುಟ ಸಭೆಯಲ್ಲಿ ಇಟ್ಟು ಮೀನುಗಾರಿಕಾ ಇಲಾಖೆಯ ಕಾರ್ಯದರ್ಶಿ ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮೀನುಗಾರರ ಸಾಲಮನ್ನಾಕ್ಕೆ ಅಂಕಿತ ಹಾಕಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.