ಶಿವಪಾಡಿ: ಇಲ್ಲಿನ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆ 22 ರಿಂದ ಮಾರ್ಚ್ 05 ರವರೆಗೆ ನಡೆಯಲಿರುವ ಅತಿರುದ್ರ ಮಹಾಯಾಗದ ಪ್ರಯುಕ್ತ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ಮತ್ತು ಅತಿರುದ್ರ ಮಹಾಯಾಗ ಸಮಿತಿಯು ಮಂಗಳವಾರದಂದು ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡಿತ್ತು.
ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷ, ಶಾಸಕ ಕೆ. ರಘುಪತಿ ಭಟ್ ಮಾತನಾಡಿ , 121 ಋತ್ವಿಜರ ನೇತೃತ್ವದಲ್ಲಿ 11 ಕುಂಡಗಳಲ್ಲಿ 12 ದಿನಗಳ ಕಾಲ ನಡೆಯಲಿರುವ ಅತಿರುದ್ರ ಮಹಾಯಾಗಕ್ಕೆ ಆಗಮಿಸಲಿರುವ 180 ಋತ್ವಿಜರ ವಾಸ್ತವ್ಯಕ್ಕಾಗಿ “ಈಶಾವಾಸ್ಯಾಂ” ವಸತಿ ಗೃಹ ರಚನೆಯಾಗಿದೆ. ಈ ಯಾಗದಲ್ಲಿ ಪಾಲ್ಗೊಳ್ಳುವ 35,000 ದಿಂದ 1 ಲಕ್ಷದವರೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆಗೆ ಬೇಕಾಗುವ ಭೋಜನಾ ವ್ಯವಸ್ಥೆಗೆ “ಸೀತಾರಸೋಯಿ” ಪಾಕಶಾಲೆ, ಅನ್ನಪೂರ್ಣ ಭೋಜನ ಶಾಲೆ ಹಾಗೂ ಉಗ್ರಾಣ ಸಜ್ಜಾಗಿದೆ. ಅತಿರುದ್ರ ಮಹಾಯಾಗದಲ್ಲಿ ಸಾರಿಗೆ ಸಚಿವ ಶ್ರೀರಾಮುಲು, ಕಂದಾಯ ಸಚಿವ ಆರ್. ಅಶೋಕ್, ತೇಜಸ್ವಿ ಸೂರ್ಯ, ಅಣ್ಣಾಮಲೈ ಮತ್ತು ಹೊರನಾಡು ಧರ್ಮದರ್ಶಿಗಳಾದ ಭೀಮೇಶ್ವರ ಜೋಷಿ ಭಾಗವಹಿಸಲಿದ್ದಾರೆ. ಯಾಗದ ಪ್ರಯುಕ್ತ 12 ದಿನಗಳ ಕಾಲ ಹಲವಾರು ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಾರಣಾಸಿಯಲ್ಲಿ ನಡೆಯುವ ಗಂಗಾರತಿಯ ಮಾದರಿಯಲ್ಲಿ, ಶಿವಾರತಿ ನಡೆಯಲಿದೆ. ಇತಿಹಾಸದಲ್ಲೇ ಪ್ರಥಮ ಬಾರಿಗೆ ನಡೆಯಲಿರುವ ರುದ್ರಯಾಗದಲ್ಲೇ ಅತೀ ದೊಡ್ಡ ಯಾಗವಾದ ಅತಿರುದ್ರ ಮಹಾಯಾಗಕ್ಕೆ ಉಡುಪಿಯ ಜನರು ಆಗಮಿಸಿ, ಹೊರೆಕಾಣಿಕೆಯನ್ನು ನೀಡಬೇಕಾಗಿ ಕೇಳಿಕೊಂಡ ಅವರು ಈ ಮಹಾಯಾಗದ ತಯಾರಿಗಾಗಿ ಸುಮಾರು 7-8 ಎಕರೆ ಜಾಗದ ವ್ಯವಸ್ಥೆಯನ್ನು ಮಾಡಿಕೊಟ್ಟ ಮಾಹೆ ವಿಶ್ವವಿದ್ಯಾಲಯಕ್ಕೆ ಅಭಿನಂದಿಸಿದರು.
ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ಮಹೇಶ್ ಠಾಕೂರ್ ಮಾತನಾಡಿ, ಅತಿರುದ್ರ ಮಹಾಯಾಗದ ಎಲ್ಲ ತಯಾರಿ ಹಾಗೂ ಭಕ್ತರಿಗಾಗಿ ಕಲ್ಪಿಸಲಾಗಿರುವ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಅತಿರುದ್ರ ಮಹಾಯಾಗದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಕ್ಕೆಹಳ್ಳಿ, ಕೋಶಾಧಿಕಾರಿ ಸತೀಶ್ ಪಾಟೀಲ್, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಎಸ್. ಮದ್ದೋಡಿ, ಸಾಂಸ್ಕೃತಿಕ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ, ಕಾರ್ಯಲಯ ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು, ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಆಡಳಿತ ಮೊಕ್ತೇಸರ ದಿನೇಶ್ ಪ್ರಭು ಮತ್ತು ಟ್ರಸ್ಟಿ ಸಂಜಯ ಪ್ರಭು ಉಪಸ್ಥಿತರಿದ್ದರು.