ಜ್ಞಾನವಾಪಿ ಮಂದಿರ ಪರಿಸರದಲ್ಲಿ ಹಿಂದೂ ಪಕ್ಷಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಿದ ವಾರಣಾಸಿಯ ಜಿಲ್ಲಾ ನ್ಯಾಯಾಲಯ

ವಾರಣಾಸಿ: ವಾರಣಾಸಿಯ ಜಿಲ್ಲಾ ನ್ಯಾಯಾಲಯವು ಬುಧವಾರದಂದು ಹಿಂದೂ ಪಕ್ಷದವರಿಗೆ ಜ್ಞಾನವಾಪಿ ಮಂದಿರದ ದಕ್ಷಿಣ ನೆಲಮಾಳಿಗೆಯಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿದೆ.

ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್‌ನಿಂದ ನಾಮನಿರ್ದೇಶನಗೊಂಡ ಪೂಜಾರಿ ಮತ್ತು ಹಿಂದೂ ಕಡೆಯಿಂದ ಪೂಜೆಯನ್ನು ಮಾಡಲು ವ್ಯವಸ್ಥೆ ಮಾಡುವಂತೆ ನ್ಯಾಯಾಲಯ ಸೂಚಿಸಿದೆ.

“ಏಳು ದಿನದೊಳಗೆ ಪೂಜೆ ಆರಂಭವಾಗಲಿದೆ. ಪ್ರತಿಯೊಬ್ಬರಿಗೂ ಪೂಜೆ ಮಾಡುವ ಹಕ್ಕಿದೆ” ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ.

https://twitter.com/i/status/1752631382034338207

ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್‌ ಪೂಜೆಯ ವಿಧಿ ವಿಧಾನಗಳನ್ನು ನಿರ್ವಹಿಸಲಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಶಿವಲಿಂಗವೆಂದು ಹೇಳಲ್ಪಡುವ ಸೀಲು ಮಾಡಲಾದ ಭಾಗದ ಉತ್ಖನನ ಮತ್ತು ವೈಜ್ಞಾನಿಕ ಸಮೀಕ್ಷೆಯನ್ನು ಕೋರಿ ನಾಲ್ವರು ಹಿಂದೂ ಮಹಿಳೆಯರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಒಂದು ದಿನದ ನಂತರ ಜಿಲ್ಲಾ ನ್ಯಾಯಾಲಯದ ಆದೇಶ ಬಂದಿದೆ.

ಕೆಲದಿನಗಳ ಹಿಂದೆ ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್‌ಐ) ವರದಿಯು ಪ್ರಸ್ತುತ ಕಟ್ಟಡಕ್ಕೂ ಮುನ್ನ ಅಲ್ಲೊಂದು ದೊಡ್ಡ ಹಿಂದೂ ದೇವಾಲಯ ಅಸ್ತಿತ್ವದಲ್ಲಿತ್ತು ಎಂದು ಬಹಿರಂಗಪಡಿಸಿರುವ ಹಿನ್ನೆಲೆಯಲ್ಲಿ ಮಹಿಳೆಯರು ಕೋರ್ಟ್ ಮೆಟ್ಟಿಲೇರಿದ್ದಾರೆ.