ಉಡುಪಿ ಜಿಲ್ಲೆಯಾದ್ಯಂತ ವರಮಹಾಲಕ್ಷ್ಮಿ ಹಬ್ಬ ಸಂಭ್ರಮ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.

ಹಬ್ಬದ ಅಂಗವಾಗಿ ಮಹಿಳೆಯರು ಬೆಳಗ್ಗೆಯೇ ಮನೆಗಳನ್ನು ಸ್ವಚ್ಛಗೊಳಿಸಿ, ಮನೆ ಮುಂಭಾಗದಲ್ಲಿ ರಂಗೋಲಿ ಬಿಡಿಸಿ, ತೋರಣ ಕಟ್ಟಿ, ಹೊಸ ಬಟ್ಟೆ ಹಾಗೂ ಆಭರಣಗಳನ್ನು ಧರಿಸಿ ವರಮಹಾಲಕ್ಷ್ಮಿ ದೇವಿಯ ಪೂಜೆ ನೆರವೇರಿಸಿದರು. ಮನೆಗಳಲ್ಲಿ ವಿಶೇಷ ನೈವೇದ್ಯ ಸಿದ್ಧಪಡಿಸಿ, ದೇವಿಗೆ ಅರ್ಪಿಸಿ ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು.

ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ವರಮಹಾಲಕ್ಷ್ಮಿ ಹಬ್ಬವು ಹಿಂದೂಗಳ ಪಾಲಿಗೆ ಅತ್ಯಂತ ಪವಿತ್ರ ಹಾಗೂ ಮಹತ್ವದ ಹಬ್ಬವಾಗಿದೆ. ಕುಟುಂಬದ ಸುಖ, ಸಮೃದ್ಧಿ, ಆರೋಗ್ಯ ಹಾಗೂ ನೆಮ್ಮದಿಗಾಗಿ ಮಹಿಳೆಯರು ವ್ರತಾಚರಣೆ ನಡೆಸಿ ದೇವಿಯ ಆರಾಧನೆ ಮಾಡಿದರು.

ಹಬ್ಬದ ಹಿನ್ನೆಲೆಯಲ್ಲಿ ಉಡುಪಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಮಾರಾಟ ಭರಾಟೆ ಜೋರಾಗಿತ್ತು. ಮಾರುಕಟ್ಟೆ ಹಾಗೂ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಬೆಳಗ್ಗೆಯಿಂದಲೇ ಜನರು ಹೂ–ಹಣ್ಣುಗಳನ್ನು ಖರೀದಿಸಲು ಮುಗಿಬಿದ್ದ ದೃಶ್ಯ ಕಂಡುಬಂತು. ಹಬ್ಬದ ಸಂಭ್ರಮದಿಂದ ಮಾರುಕಟ್ಟೆ ಪ್ರದೇಶಗಳು ಜನರಿಂದ ಗಿಜಿಗುಡುತ್ತಿದ್ದವು.