ಜೂನ್ 10ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ “ವರಾಹ ಮಿಹಿರನ್” ಕಥಕ್ಕಳಿ ಪ್ರದರ್ಶನ

ಉಡುಪಿ: ಉಜ್ಜಯಿನಿ ರಾಜಮನೆತನವನ್ನು ಐತಿಹಾಸಿಕ ನವರತ್ನಗಳಲ್ಲಿ ಅಲಂಕರಿಸಿದ ಪೌರಾಣಿಕ ಖಗೋಳಶಾಸ್ತ್ರಜ್ಞ, ಜ್ಯೋತಿಷಿಯ ಜೀವನಾಧಾರಿತ “ವರಾಹ ಮಿಹಿರನ್” ಕಥಕ್ಕಳಿ ಪ್ರದರ್ಶನವು ಜೂನ್‌ 10ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಸ್ವರ್ಣಮುಖಿ ರಂಗಮಂದಿರದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಸಂಯೋಜಕ ಚೇತಲ್ಲೂರ್ ವಿಜಯಕುಮಾರ್ ಗುಪ್ತನ್ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಕೇರಳದ ಖ್ಯಾತ ಕಥಕ್ಕಳಿ ಕಲಾವಿದರು ಲವರಾಹಮಿಹಿರರ ಜ್ಯೋತಿಷ್ಯ ಪ್ರಜ್ಞೆ ಹಾಗೂ ಐತಿಹಾಸಿಕ ಭವಿಷ್ಯವಾಣಿಯನ್ನು ಆಧರಿಸಿದ ದೃಶ್ಯಮಯ ನಿರೂಪಣೆಯನ್ನು ಪ್ರದರ್ಶಿಸಲಿದ್ದಾರೆ ಎಂದರು.

‘ವರಾಹ ಮಿಹಿರನ್’ ಎಂಬ ಈ ಕಥಕ್ಕಳಿಯ ಕಥಾವಸ್ತು, ಉಜ್ಜಯಿನಿ ಸಾಮ್ರಾಜ್ಯದ ಚಕ್ರವರ್ತಿ ವಿಕ್ರಮಾದಿತ್ಯನ ಪುತ್ರನ ಜನ್ಮಜಾತಕ ಮತ್ತು ಅದರ ಆಧಾರದ ಮೇಲೆ ಆಚಾರ್ಯ ವರಾಹಮಿಹಿರರು ಮಾಡಿದ ಭವಿಷ್ಯವಾಣಿಯ ಸುತ್ತ ಹೆಣೆಯಲಾಗಿದೆ.

ಈ ನಾಟಕದ ಚಿತ್ರಕಥೆಯನ್ನು ವಾಮನನ್ ನಂಬೂದಿರಿ ರಚಿಸಿದ್ದು, ಕಲಾಮಂಡಲಂ ಕೇಶವನ್ ನಂಬೂದಿರಿ ನಿರ್ದೇಶನ ಮಾಡಿದ್ದಾರೆ. ಸಮಗ್ರ ಪರಿಕಲ್ಪನೆ, ನಿರ್ಮಾಣ ವಿನ್ಯಾಸ ಮತ್ತು ನಿರೂಪಣಾ ಸಂಕಲನವನ್ನು ಪಾಲಕ್ಕಾಡಿನ ಚೇತಲ್ಲೂರು ಜ್ಯೋತಿಷ ಕಲಾಲಯದ ಜ್ಯೋತಿಷಿ ವಿಜಯಕುಮಾರ್ ಗುಪ್ತನ್ ರೂಪಿಸಿದ್ದಾರೆ.

ಜೂನ್‌ 10ರಂದು ನಡೆಯುವ ಪ್ರದರ್ಶನವು ಈ ಕಾರ್ಯಕ್ರಮದ 7ನೇ ಪ್ರದರ್ಶನವಾಗಿದ್ದು, ಈಗಾಗಲೇ ಹಲವು ಕಡೆಗಳಲ್ಲಿ ಮೆಚ್ಚುಗೆ ಪಡೆದಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಜಯಕೃಷ್ಣನ್ ವಾರಿಯರ್, ತೇಜಸ್ ನಂಬೂದಿರಿ, ಅರವಿಂದ್ ಇದ್ದರು.