ಕಣ್ಣೂರು: ಕೇರಳದಲ್ಲಿ ಓಡಲಿರುವ ಸಂಭವನೀಯ ಎರಡನೇ ವಂದೇ ಭಾರತ್ ರೈಲಿನ ಅಂತಿಮ ಮಾರ್ಗವನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ. ಆದಾಗ್ಯೂ, ಮಂಗಳೂರು-ಕಾಸರಗೋಡು ವಿಭಾಗದ ನಿಲ್ದಾಣಗಳಲ್ಲಿ “ವಂದೇ ಭಾರತ್” ಎಂದು ಸೂಚಿಸುವ ಫಲಕಗಳನ್ನು ಅಳವಡಿಸಲಾಗಿದ್ದು ಇದು ಈ ಭಾಗದಲ್ಲಿ ಇಂಜಿನ್ ಅನ್ನು ನಿಲ್ಲಿಸಲು ಲೋಕೋ ಪೈಲಟ್ಗಳಿಗೆ ಸೂಚನೆಯಾಗಿದೆ. ಈ ಅಳವಡಿಕೆಯು ವಂದೇ ಭಾರತ್ ರೈಲು ಕಾಸರಗೋಡು-ಮಂಗಳೂರು ಮಾರ್ಗವನ್ನು ಒಳಗೊಳ್ಳುತ್ತದೆ ಎಂದು ಸೂಚಿಸುತ್ತದೆ. ಈಗಿರುವ ರೈಲು ತಿರುವನಂತಪುರ-ಕಾಸರಗೋಡು ಮಾರ್ಗದಲ್ಲಿ ಸಂಚರಿಸುತ್ತದೆ.
ಮಂಗಳೂರು-ತಿರುವನಂತಪುರಂ, ಮಂಗಳೂರು-ಕೊಟ್ಟಾಯಂ, ಮಂಗಳೂರು-ಎರ್ನಾಕುಲಂ, ಮತ್ತು ಮಂಗಳೂರು-ಕೊಯಂಬತ್ತೂರು ಇವು ಕೇರಳದಲ್ಲಿ ಎರಡನೇ ವಂದೇ ಭಾರತ್ ನ ಸಂಭಾವ್ಯ ಮಾರ್ಗಗಳಾಗಿವೆ ಎಂದು ವರದಿಯಾಗಿದೆ.
ಆ.30 ರಂದು ದಕ್ಷಿಣ ರೈಲ್ವೆಗೆ ವಂದೇ ಭಾರತ್ ರೈಲು ಹಂಚಿಕೆಯಾಗಿದ್ದರೂ ಇನ್ನೂ ಪ್ರಾಯೋಗಿಕ ಸಂಚಾರ ನಡೆದಿಲ್ಲ. ರೈಲು ಪ್ರಸ್ತುತ ಚೆನ್ನೈನ ಬೇಸಿನ್ ಬ್ರಿಡ್ಜ್ ಯಾರ್ಡ್ನಲ್ಲಿ ನಿಂತಿದ್ದು, ಮಂಗಳೂರಿನ ಇಂಜಿನಿಯರ್ಗಳ ಉಪಸ್ಥಿತಿಯೊಂದಿಗೆ ತಪಾಸಣೆ ನಡೆಸಲಾಗಿದೆ.