ವಾಲ್ಮೀಕಿ ಜಯಂತಿ ರಜೆ ದಿನಾಂಕ ಬದಲು, ಸಾಲು ಸಾಲು ರಜೆಗೆ ಜನತೆ ಖುಷ್!

ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ಅಕ್ಟೋಬರ್ 25ರಂದು ನಿಗದಿಯಾಗಿದ್ದ ರಜೆಯನ್ನು ಬದಲಾಯಿಸಿ, ಅಕ್ಟೋಬರ್ 26ರಂದು ವಾಲ್ಮೀಕಿ ಜಯಂತಿ ಆಚರಿಸಲು ಹಾಗೂ ಅಂದೇ ಸಾರ್ವತ್ರಿಕ ರಜೆ ನೀಡಲು ಸರ್ಕಾರ ನಿರ್ಧರಿಸಿದೆ.

2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅಕ್ಟೋಬರ್ 25ರಂದು ಘೋಷಿಸಲಾಗಿತ್ತು. ಆದರೆ, ವಾಲ್ಮೀಕಿ ಜಯಂತಿಯನ್ನು ‘ಶೀಗಿ ಹುಣ್ಣಿಮೆ’ಯಂದೇ ಆಚರಿಸುವ ಹಿನ್ನೆಲೆಯಲ್ಲಿ, ಈ ಬಾರಿ ಶೀಗಿ ಹುಣ್ಣಿಮೆ ಅಕ್ಟೋಬರ್ 26ರಂದು ಬರುತ್ತಿರುವುದರಿಂದ ಅದೇ ದಿನ ಜಯಂತಿ ಆಚರಿಸಲು ಸರ್ಕಾರ ನಿರ್ಧರಿಸಿದೆ.

ಅಕ್ಟೋಬರ್ 26ರಂದು ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಸೇರಿದಂತೆ ರಾಜ್ಯದ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಸಾರ್ವತ್ರಿಕ ರಜೆ ಇರಲಿದೆ. ಇದರಿಂದ ಅಕ್ಟೋಬರ್ 24ರಿಂದ 26ರವರೆಗೆ ಸತತ ಮೂರು ದಿನಗಳ ರಜೆ ದೊರೆಯಲಿದೆ.

ಅಕ್ಟೋಬರ್ 24: ನಾಲ್ಕನೇ ಶನಿವಾರ ರಜೆ
ಅಕ್ಟೋಬರ್ 25: ಭಾನುವಾರ ರಜೆ
ಅಕ್ಟೋಬರ್ 26: ವಾಲ್ಮೀಕಿ ಜಯಂತಿ ಪ್ರಯುಕ್ತ ಸಾರ್ವತ್ರಿಕ ರಜೆ

ರಜೆ ದಿನಾಂಕ ಬದಲಾವಣೆಯಿಂದ ಅಕ್ಟೋಬರ್ ಕೊನೆಯ ವಾರಾಂತ್ಯದಲ್ಲಿ ಸತತ ಮೂರು ದಿನ ರಜೆ ದೊರೆಯಲಿದ್ದು, ಪ್ರವಾಸ ಹಾಗೂ ಊರಿಗೆ ತೆರಳುವವರಿಗೆ ಅನುಕೂಲವಾಗಲಿದೆ.