ಉಡುಪಿ: ಜಾಗತಿಕವಾಗಿ ಭಾರತವು ತನ್ನ ಛಾಪನ್ನು ವಿಶೇಷವಾಗಿ ಮೂಡಿಸಬೇಕಾದರೆ ಆರ್ಥಿಕ ಹಾಗೂ ರಾಜಕೀಯದ ಜೊತೆಗೆ ಸಾಮಾಜಿಕವಾಗಿ ಕೂಡ ಅಭಿವೃದ್ಧಿ ಹೊಂದುವ ಅವಶ್ಯಕತೆಯನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯವರು ಮನಗಂಡಿದ್ದರು. ತಮ್ಮ ಸುದೀರ್ಘ ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ರಾಜಕೀಯ ಜೀವನದಲ್ಲಿ ದೇಶವನ್ನು ಸಾಮಾಜಿಕವಾಗಿ ಪ್ರಗತಿ ಪಥದತ್ತ ಕೊಂಡೊಯ್ಯುವ ಚಿಂತನೆಗಳನ್ನು ಅಳವಡಿಸಿಕೊಂಡಿದ್ದರು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಮಾಜಿ ಪ್ರಧಾನಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಉಪ್ಪೂರು ಸಾಲುಮರ ಸ್ಪಂದನ ಮಾನಸಿಕ ಭಿನ್ನ ಸಾಮರ್ಥ್ಯದ ವಸತಿ ಕೇಂದ್ರದ ನಿವಾಸಿಗಳಿಗೆ ಅವಶ್ಯಕ ವಸ್ತುಗಳನ್ನು ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಟಲ್ ಜಿ ತಮಗೆ ದೊರೆತ ಅಧಿಕಾರಾವಧಿಯಲ್ಲಿ ದೇಶದಲ್ಲಿ ಸುಧಾರಣೆ ತರುವ ಯೋಜನೆಗಳನ್ನು ಜಾರಿಗೊಳಿಸುವುದರ ಜತೆಗೆ ಭಿನ್ನ ಸಾಮರ್ಥ್ಯದ ದಿವ್ಯಾಂಗರ ಕಲ್ಯಾಣಕ್ಕಾಗಿ ಯೋಜನೆಗಳನ್ನು ಹಮ್ಮಿಕೊಂಡಿದ್ದರು ಎಂದರು.
ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ಉಡುಪಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ನಗರ ಬಿಜೆಪಿ ಪ್ರದಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ, ಕಾರ್ಯದರ್ಶಿಗಳಾದ ದಯಶಿನಿ ಪಂದುಬೆಟ್ಟು, ಲಕ್ಷ್ಮಿ ಶೆಟ್ಟಿ ಕಿನ್ನಿಮೂಲ್ಕಿ, ನಗರ ಯುವ ಮೋರ್ಚಾ ಅಧ್ಯಕ್ಷರಾದ ರೋಷನ್ ಶೆಟ್ಟಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್, ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಸೈಮಂಡ್ಸ್ ಕ್ರಿಕೆಟರ್ಸ್ ಕಡಿಯಾಳಿ ಇದರ ಸಂಚಾಲಕ ನರಸಿಂಹ ಕಿಣಿ ಮತ್ತಿತರರು ಉಪಸ್ಥಿತರಿದ್ದರು. ಸ್ಪಂದನ ಇದರ ಪ್ರಾಂಶುಪಾಲ ಜನಾರ್ಧನ್ ಕಾರ್ಯಕ್ರಮ ನಿರೂಪಿಸಿದರು.