ಕಾರ್ಕಳ ಪೂರ್ಣಿಮಾ ಸಿಲ್ಕ್ಸ್ ನಲ್ಲಿ ವಾಜಪೇಯಿ ಜನ್ಮದಿನಾಚರಣೆ

ಕಾರ್ಕಳ: ಇಲ್ಲಿನ ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ಸ್ ನಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ
ರಾಜ್ಯ ಸರಕಾರದ ಮುಖ್ಯ ಸಚೇತಕ ಹಾಗೂ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಮಾತನಾಡಿ, ವಾಜಪೇಯಿ ಅವರ ಆಡಳಿತ ಭಾರತದ ಸುವರ್ಣ ಯುಗ. ಅವರು ಜಾರಿಗೆ ತಂದ ಗ್ರಾಮ ಸಡಕ್ ಯೋಜನೆ, ಸುಜಲಧಾರ ಯೋಜನೆ ಮೂಲಕ ದೇಶದ ಹಳ್ಳಿ ಹಳ್ಳಿಗಳನ್ನು ಅಭಿವೃದ್ಧಿಪಡಿಸಿದರು. ಎಲ್ಲ ಪಕ್ಷದವರನ್ನು ಗೌರವದಿಂದ ಕಾಣುತ್ತಿದ್ದ ಅವರು ಅಜಾತ ಶತ್ರುವಾಗಿದ್ದರೂ, ಅಪ್ಪಟ ದೇಶಭಕ್ತಿನಾಗಿದ್ದರು. ತನ್ನ ಕಾರ್ಯವೈಖರಿಯಿಂದ ಇಂದಿಗೂ ಅಪಾರ ಜನಮೆಚ್ಚುಗೆ ಗಳಿಸಿದ್ದಾರೆ ಎಂದು ಬಣ್ಣಿಸಿದರು.

ಪೂರ್ಣಿಮಾ ಪಾಂಡುರಂಗ ಪ್ರಭು ಅವರ ಮಾರ್ಗದರ್ಶನದಿಂದ ಹಾಗೂ ಅವರ ಸಹಕಾರದಿಂದ ಕಾರ್ಕಳದಲ್ಲಿ ಬಿಜೆಪಿ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು. ಈ ನಿಟ್ಟಿನಲ್ಲಿ ಪೂರ್ಣಿಮಾ ಸಿಲ್ಕ್ಸ್ ರವಿ ಪ್ರಕಾಶ್ ಪ್ರಭು ದಂಪತಿ ಅವರ ಕಾರ್ಯವನ್ನು ಶ್ಲಾಘಿಸಿದರು.

ಕಾರ್ಕಳ ಪುರಸಭಾ ಮಾಜಿ ಸದಸ್ಯ, ಉದ್ಯಮಿ ಟಿ. ರಾಮಚಂದ್ರ ನಾಯಕ್ ಮಾತನಾಡಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕಾರ್ಕಳಕ್ಕೆ ಆಗಮಿಸಿ ಪಾಂಡುರಂಗ ಪ್ರಭುಗಳ ಕೇಶವ ಕೃಪಾಕ್ಕೆ ಭೇಟಿ ನೀಡಿದ ನೆನಪನ್ನು ಮೆಲುಕು ಹಾಕಿದರು.
ಕಾರ್ಕಳ ನಗರ ಬಿಜೆಪಿ ಅಧ್ಯಕ್ಷ ಆರ್. ಅನಂತಕೃಷ್ಣ ಶೆಣೈ, ಭುವನೇಂದ್ರ ವಿದ್ಯಾಸಂಸ್ಥೆಯ ಸಂಚಾಲಕ ನಿತ್ಯಾನಂದ ಪೈ ಶುಭಹಾರೈಸಿದರು.

ಪೂರ್ಣಿಮಾ ಸಿಲ್ಕ್ಸ್ ನ ಮಾಲೀಕ ರವಿ ಪ್ರಕಾಶ್ ಪ್ರಭು ಮಾತನಾಡಿ, ವಾಜಪೇಯಿ ಅವರು ತಮ್ಮ ಮನೆಯ ಆತಿಥ್ಯವನ್ನು ಸ್ವೀಕರಿಸಿ ಅನ್ನದಾತ ಸುಖೀಭವ ಎನ್ನುವ ಮಾತನ್ನು ನುಡಿದಿದ್ದರು‌. ಅದರಂತೆ ಪೂರ್ಣಿಮಾ ಸ್ಥಾಪಕ ಪಾಂಡುರಂಗ ಪ್ರಭು ಅವರು ನಡೆದರು. ಅವರ ಕಾರ್ಯವನ್ನು ಮುನ್ನಡೆಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಜೆಸಿಸ್ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.