ಹಾಡು ನಿಲ್ಲಿಸಿದ ಕುಂದಾಪುರದ  ಟ್ರೋಲ್ ಕಿಂಗ್ ವೈಕುಂಠ :  ಜನಮನಗೆದ್ದ ಬಿಂದಾಸ್ ಹಾಡುಗಾರ ಇನ್ನಿಲ್ಲ

ಕುಂದಾಪುರ: ತನ್ನ ವಿಭಿನ್ನ ಶೈಲಿಯ ಹಾಡುಗಾರಿಕೆ ಮೂಲಕ ಕುಂದಾಪುರದ ಜನರನ್ನು ರಂಜಿಸುತ್ತಿದ್ದ ರಾಕ್‌ಸ್ಟಾರ್ ಖ್ಯಾತಿಯ ಕುಂದಾಪುರದ ವೈಕುಂಠ ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ.

ಹಂಗಳೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ನೇರಂಬಳ್ಳಿ ನಿವಾಸಿ ವೈಕುಂಠ ಕಳೆದ ನಾಲ್ಕು ದಿನಗಳಿಂದ ಕುಂದಾಪುರದ ಇಂದಿರಾ ಕ್ಯಾಂಟೀನ್ ಹಿಂಭಾಗದಲ್ಲಿರುವ ಪಶು ಆಸ್ಪತ್ರೆಯ ಆವರಣದಲ್ಲಿ ತೀವ್ರ ಅಸ್ವಸ್ಥಗೊಂಡು ಮಲಗಿದ್ದರು. ಸ್ಥಳೀಯರು ಅಸ್ವಸ್ಥಗೊಂಡಿರುವ ವೈಕುಂಠ ಅವರ ಫೋಟೋ ಕ್ಲಿಕ್ಕಿಸಿ ತುರ್ತು ಚಿಕಿತ್ಸೆಯ ಅಗತ್ಯವಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರಹ ಪ್ರಕಟಿಸಿದ್ದರು. ಕೂಡಲೇ ಸಾಮಾಜಿಕ ಕಾರ್ಯಕರ್ತ ಜೋಯ್ ಕುಂದಾಪುರ ವೈಕುಂಠ ಅವರನ್ನು ೧೦೮ ಆಂಬುಲೆನ್ಸ್ ಮೂಲಕ ಉಡುಪಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈಕುಂಠ ಅಸ್ವಸ್ಥಗೊಂಡಿರುವ ಸುದ್ದಿ ವೈರಲ್ ಆಗುತ್ತಿದ್ದಂತೆ ವೈಕುಂಠ ಅವರಿಗೆ ತುರ್ತು ಚಿಕಿತ್ಸೆ ನೀಡಲು ಸ್ಥಳೀಯ ಯುವಕರು ಮುಂದಾಗಿದ್ದು, ನೆಟ್ಟಿಗ ರಂಜಿತ್ ಹೆಂಗವಳ್ಳಿ, ವಿನಯ್‌ಚಂದ್ರ ಸಾಸ್ತಾನ ಮೊದಲಾದವರು ವೈಕುಂಠ ಅವರನ್ನು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡುವಲ್ಲಿ ಶ್ರಮಿಸಿದ್ದರು.ಆದರೆ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ

ಪಶು ಆಸ್ಪತ್ರೆಯೇ ಮನೆ:
ಮಾನಸಿಕವಾಗಿ ಅಸ್ವಸ್ಥಗೊಂಡು ಮನೆ ತ್ಯಜಿಸಿದ ವೈಕುಂಠ ಕಳೆದ ಕೆಲ ವರ್ಷಗಳಿಂದ ಕುಂದಾಪುರದ ಆಸುಪಾಸಿನಲ್ಲಿ ತಿರುಗಾಡಿ ಅವರಿವರು ಕೊಟ್ಟ ಹಣದಲ್ಲಿ ಊಟ ಮಾಡಿ ಶಾಸ್ತ್ರೀ ಸರ್ಕಲ್‌ನಲ್ಲಿರುವ ಇಂದಿರಾ ಕ್ಯಾಂಟೀನ್ ಹಿಂಬದಿಯ ಪಶು ಆಸ್ಪತ್ರೆಯ ಆವರಣದಲ್ಲಿ ಮಲಗಿ ದಿನ ಕಳೆಯುತ್ತಿದ್ದರು.

ಟ್ರೋಲ್ ಪೇಜ್‌ನಲ್ಲಿ ವೈಕುಂಠನ ಹವಾ:
ಮೂರ್ನಾಲ್ಕು ವರ್ಷಗಳಿಂದ ವಾಟ್ಸಾಪ್, ಫೇಸ್‌ಬುಕ್‌ಗಳಲ್ಲಿ ವೈಕುಂಠ ಅವರು ಹಾಡಿರುವ ಕೆಲವು ಗೀತೆಗಳು ಸಾಕಷ್ಟು ವೈರಲ್ ಆಗಿದ್ದವು. ಆ ಬಳಿಕ ವೈಕುಂಠ ಕುಂದಾಪುರ ಜನತೆಗೆ ಚಿರಪರಿಚಿತರಾಗಿದ್ದರು. ಕುಂದಾಪುರದ ಹಲವು ಟ್ರೋಲ್ ಪೇಜ್‌ಗಳಲ್ಲಿ ವೈಕುಂಠ ಅವರ ಚಿತ್ರಗಳು, ವಿಡಿಯೋ ತುಣುಕುಗಳು ವೈರಲ್ ಆಗಿದ್ದು, ಕುಂದಾಪುರದ ಆಸುಪಾಸಿನಲ್ಲಿ ವೈಕುಂಠ ಅವರನ್ನು ನೋಡಿದಾಕ್ಷಣ ಎಲ್ಲರೂ ಅವರನ್ನು ಸಲುಗೆಯಿಂದ ಕರೆದು ಮಾತಾಡಿಸುತ್ತಿದ್ದರು. ಕೆಲ ಟ್ರೋಲ್ ಪೇಜ್‌ಗಳಲ್ಲಿ ವೈಕುಂಠ ಅವರಿಗೆ ರಾಕ್‌ಸ್ಟಾರ್ ಎಂಬ ಬಿರುದು ನೀಡಲಾಗಿದ್ದು, ಅವರನ್ನು ಹೀರೋ ಎಂಬಂತೆಯೂ ಬಿಂಬಿಸಲಾಗಿತ್ತು.

ಕೆಟ್ಟದ್ದಕ್ಕೂ ಬಳಕೆ:
ಕೆಲವರು ವೈಕುಂಠ ಅವರ ಪ್ರತಿಭೆಯನ್ನು ಹೊರತರುವಲ್ಲಿ ಶ್ರಮಿಸಿದರೆ ಇನ್ನೂ ಕೆಲವರು ಅವರನ್ನು ಕೆಟ್ಟ ವಿಷಯಗಳಿಗೂ ಬಳಸಿಕೊಳ್ಳುತ್ತಿದ್ದರು. ಹಣದ ಆಮೀಷ ತೋರಿಸಿ ತಮಗೆ ಬೇಕಾದ ಹಾಗೆ ಅವರಿಂದ ಮಾತನಾಡಿಸಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದು, ಇನ್ನುಕೆಲವರು ಮಧ್ಯಪಾನ ಮಾಡಿಸಿ ಅವರಿಂದ ಅವಾಚ್ಯ ಶಬ್ದಗಳಿಂದ ತಮ್ಮ ಸ್ನೇಹಿತರಿಗೆ ಬಯ್ಯಲು ಹೇಳಿ ವಿಕೃತ ಆನಂದ ಪಡುತ್ತಿದ್ದರು. ಇದೀಗ ಟ್ರೋಲ್ ಕಿಂಗ್ ಹಾಡಿ ನಿಲ್ಲಿಸಿದ್ದಾರೆ. ಕುಂದಾಪುರ ಕಂಬನಿ ಮಿಡಿದಿದೆ.