ವೈದ್ಯರ ಮೇಲೆ ಹಲ್ಲೆ ಖಂಡಿಸಿ ಮಂಗಳೂರಲ್ಲಿ ಪ್ರತಿಭಟನೆ

ಮಂಗಳೂರು: ಪಶ್ಚಿಮ ಬಂಗಾಳದಲ್ಲಿ ಕಾರ್ಯನಿರತ ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಸೋಮವಾರ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಚಿಕಿತ್ಸಾ ವಿಭಾಗದ ಸೇವೆಗಳನ್ನು ಸ್ಥಗಿತಗೊಳಿಸಿ ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಮಂಗಳೂರಿನ ಭಾರತೀಯ ವೈದ್ಯಕೀಯ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಯಿತು. ನಗರದ ಐಎಂಎ ಸಭಾಂಗಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಖಾಸಗಿ ವೈದ್ಯರು ಭಾಗಿಯಾಗಿದ್ದರು.
ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡ ಕಾರಣ ವಿವಿಧ ಭಾಗದಿಂದ ಚಿಕಿತ್ಸೆಗೆ ಆಗಮಿಸಿದ ಹೊರರೋಗಿಗಳು ತೊಂದರೆ ಅನುಭವಿಸುವಂತಾಗಿದೆ.
ಜಿಲ್ಲೆಯಲ್ಲಿ ಹೆಚ್ಚಾಗಿ ಖಾಸಗಿ ಆಸ್ಪತ್ರೆಗಳು ಇರುವುದರಿಂದ ರೋಗಿಗಳು ತೊಂದರೆ ಅನುಭವಿಸಿದರು. ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ, ಒಳರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿತ್ತು.
ಇನ್ನು ಬಂದ್ ನ ಮಾಹಿತಿ ಇಲ್ಲದೇ ಆಸ್ಪತ್ರೆಗೆ ರೋಗಿಗಳು ಬಂದು ವಾಪಸ್ ಹೋಗುತ್ತಿದ್ದ ದೃಶ್ಯಗಳು ಕಂಡುಬರುತ್ತಿತ್ತು. ಮಂಗಳೂರಿನ ವೆನ್ಲಾಕ್ ಹಾಗೂ ಲೇಡಿಗೋಷನ್ ಆಸ್ಪತ್ರೆಯಲ್ಲಿ ಅಧಿಕ ಪ್ರಮಾಣದಲ್ಲಿ ರೋಗಿಗಳು ಚಿಕಿತ್ಸೆಗಾಗಿ ಕಾಯುತ್ತಿರುವ ದೃಶ್ಯಕಂಡು ಬಂತು.