ಲಖನೌ: ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು, ವಿಡಿಯೊ ಚಿತ್ರೀಕರಿಸಲು ಪ್ರಯತ್ನಿಸುವಾಗ ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
27 ವರ್ಷದ ಮೋಹಿನಿ ಮೃತ ದುರ್ದೈವಿ. ಆಕೆ ತನ್ನ ಮನೆಯೊಳಗೆ ರೀಲ್ ಶೂಟ್ ಮಾಡಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ. ಕುಟುಂಬ ಸದಸ್ಯರ ಪ್ರಕಾರ, ಮೋಹಿನಿ ನೇಣು ಬಿಗಿಯುವ ದೃಶ್ಯವನ್ನು ಸೃಷ್ಟಿಸುತ್ತಿದ್ದಳು. ಅವಳು ಕುತ್ತಿಗೆಗೆ ನೇಣು ಬಿಗಿದುಕೊಂಡು ಸ್ಟೂಲ್ ಮೇಲೆ ನಿಂತು ತನ್ನ ಮೊಬೈಲ್ ಫೋನ್‌ನಲ್ಲಿ ದೃಶ್ಯವನ್ನು ಚಿತ್ರೀಕರಿಸುತ್ತಿದ್ದಳು.
ಆದರೆ ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ದುರಂತ ತಿರುವು ಪಡೆದುಕೊಂಡಿತು. ಅವಳು ಜಾರಿದಳೋ ಅಥವಾ ಸಮತೋಲನ ಕಳೆದುಕೊಂಡಳೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಆಕೆಯ ಕುತ್ತಿಗೆಗೆ ಕುಣಿಕೆ ಬಿಗಿಯಾಗಿದ್ದು, ಕೆಲವೇ ಸೆಕೆಂಡುಗಳಲ್ಲಿ ಆಕೆಯ ಸಾವಿಗೆ ಕಾರಣವಾಯಿತು. ಮೋಹಿನಿಯ ನಾಲ್ಕು ವರ್ಷದ ಮಗಳು ಕೋಣೆಗೆ ಪ್ರವೇಶಿಸಿದಾಗ ಈ ಘಟನೆ ಬೆಳಕಿಗೆ ಬಂದಿತು. ತಾಯಿ ನೇಣು ಬಿಗಿದುಕೊಂಡಿರುವುದನ್ನು ನೋಡಿದ ಮಗು ಸಹಾಯಕ್ಕಾಗಿ ಕಿರುಚಿತು. ಕೂಗು ಕೇಳಿ ನೆರೆಹೊರೆಯವರು ಒಳಗೆ ಓಡಿ ಬಂದು ನೋಡಿದ ದೃಶ್ಯದಿಂದ ದಿಗ್ಭ್ರಮೆಗೊಂಡರು. ಅಷ್ಟೊತ್ತಿಗಾಗಲೇ ಆಕೆ ಮೃತಪಟ್ಟಿದ್ದಳು.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಶವವನ್ನು ಕುಣಿಕೆಯಿಂದ ಕೆಳಗಿಳಿಸಿದರು. ಮೃತದೇಹವನ್ನು ವಶಕ್ಕೆ ತೆಗೆದುಕೊಂಡು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣವನ್ನು ಎಲ್ಲ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
















