ಉತ್ತರಪ್ರದೇಶ: ಉತ್ತರಪ್ರದೇಶದ ಗರೌತ ಪ್ರದೇಶದಲ್ಲಿ 18 ವರ್ಷದ ತನ್ನ ಸಹೋದರಿ ಮತ್ತೊಬ್ಬ ವ್ಯಕ್ತಿಯ ಜತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಬೇಸತ್ತ ವ್ಯಕ್ತಿಯೊಬ್ಬ, ರಕ್ಷಾ ಬಂಧನ ಆಚರಿಸಿದ ನಂತರ ಆಕೆಯನ್ನು ಕೊಂದ ಘಟನೆ ಭಾನುವಾರ ನಡೆದಿದೆ.
ಚಂದ್ರಾಪುರ ಗ್ರಾಮದ ನಿರ್ಜನ ಪ್ರದೇಶದ ದಾದಾ ಮಹಾರಾಜ್ ಪ್ಲಾಟ್‌ಫಾರ್ಮ್ ಬಳಿ ಕುಮಾರಿ ಸಹೋದರ್(18) ಅಲಿಯಾಸ್ ಪುಟ್ಟಿ ಅವರ ಶವ ಭಾನುವಾರ ಪತ್ತೆಯಾಗಿದೆ.
ಈ ಕೊಲೆಗೆ ಸಂಬಂಧಿಸಿದಂತೆ ಪುಟ್ಟಿಯ ಸಹೋದರ ಅರವಿಂದ್ ಮತ್ತು ಅವರ ಸ್ನೇಹಿತ ಪ್ರಕಾಶ್ ಪ್ರಜಾಪತಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಂಗಿಯ ಪ್ರಿಯಕರನನ್ನು ಕೊಂದ ಅರವಿಂದ್:
ಆ.7 ರಂದು, ಲಹ್ಚುರಾ ಮೂಲದ 19ರ ವಿಶಾಲ್ ಅವರ ಶವ ಗುಧಾ ಗ್ರಾಮದಲ್ಲಿ ಪತ್ತೆಯಾಗಿತ್ತು. ಪೊಲೀಸರ ಪ್ರಕಾರ, ನಾಲ್ಕು ತಿಂಗಳ ಹಿಂದೆ ಪುಟ್ಟಿ ಮತ್ತು ವಿಶಾಲ್ ಮನೆಯಿಂದ ಓಡಿಹೋದರು, ಆದರೆ ಮತ್ತೆ ಮನೆಗೆ ಬರುವಂತೆ ಮನವೊಲಿಸಿದರು. ಎರಡೂ ಕುಟುಂಬಗಳ ನಡುವೆ ಪರಸ್ಪರ ರಾಜಿ ಏರ್ಪಟ್ಟಿತು ಮತ್ತು ಸ್ವಲ್ಪ ಸಮಯದವರೆಗೆ ಪರಿಸ್ಥಿತಿ ತಣ್ಣಗಾಯಿತು. ಆದಾಗ್ಯೂ, ಇಬ್ಬರೂ ಪ್ರೇಮಿಗಳು ಭೇಟಿಯಾಗಲು ಪ್ರಾರಂಭಿಸಿದರು. ಕೆಲವು ದಿನಗಳ ಹಿಂದೆ ಪುಣೆಯಿಂದ ಹಳ್ಳಿಗೆ ಮರಳಿದ್ದ ಅರವಿಂದ್‌ಗೆ ಈ ರೀತಿಯ ಸಂಬಂಧ ಮತ್ತೆ ಆರಂಭವಾಗುವುದು ಇಷ್ಟವಾಗಲಿಲ್ಲ. ಅವನು ಹಿಂದಿರುಗಿದ ನಂತರ, ಇಬ್ಬರನ್ನೂ ಕೊಲ್ಲಲು ಪ್ರಕಾಶ್ ಪ್ರಜಾಪತಿಯನ್ನು ಸೇರಿಸಿಕೊಂಡನು. ಆ.7 ರ ಬೆಳಿಗ್ಗೆ, ಕೆಲಸ ಕೊಡಿಸುವ ನೆಪದಲ್ಲಿ ವಿಶಾಲ್ ನನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶಾಲ್ ತಂದೆ ಹಾಲ್ಕೆರಾಮ್ ನೀಡಿದ ದೂರಿನ ಮೇರೆಗೆ ಪೊಲೀಸರು ಇಬ್ಬರ ಮೇಲೂ ಕೊಲೆ ಪ್ರಕರಣ ದಾಖಲಿಸಿದ್ದಾರೆ.












