ಯು.ಟಿ.ಖಾದರ್​, ಬಸವರಾಜ ಹೊರಟ್ಟಿ ಲಂಡನ್​ನಲ್ಲಿ ಬಸವೇಶ್ವರ ಪ್ರತಿಮೆಗೆ ನಮನ

ಲಂಡನ್​: ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮತ್ತು ವಿಧಾನ ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ ಅವರು ಲಂಡನ್​ಗೆ ಭೇಟಿ ನೀಡಿದ್ದು, ಭಾನುವಾರ ಲ್ಯಾಂಬೆತ್ ನಗರದ ಥೇಮ್ಸ್ ನದಿ ದಂಡೆ ಮೇಲಿರುವ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮತ್ತು ವಿಧಾನ ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ ಲ್ಯಾಂಬೆತ್​ ನಗರದಲ್ಲಿನ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ಗೌರವ ಸಲ್ಲಿಸಿದರು.

ಲ್ಯಾಂಬೆತ್‌ನ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ಅವರು ಖಾದರ್ ಹಾಗೂ ಹೊರಟ್ಟಿ ಅವರನ್ನು ಸ್ವಾಗತಿಸಿದರು. ಖಾದರ್​ ಬಸವಣ್ಣನವರ ಪ್ರತಿಮೆಗೆ ವಿಭೂತಿ ಹಚ್ಚಿದರು. ಈ ಸಂದರ್ಭದಲ್ಲಿ ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾದ ಅಜಿತ್ ಮುತ್ತಾಯಿಲ್ ನೇತೃತ್ವದಲ್ಲಿ ಬ್ರಿಟಿಷ್ ಭಾರತೀಯ/ ಕನ್ನಡ ಸಮುದಾಯದ ಸದಸ್ಯರು ಮತ್ತು ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಪ್ರತಿನಿಧಿಗಳು ಇದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿ 2015ರ ನವೆಂಬರ್ 14 ರಂದು ಬ್ರಿಟಿಷ್ ಸಂಸತ್ತಿನ ಸ್ಪೀಕರ್ ಆರ್ಟಿ ಗೌರವಾನ್ವಿತ ಜಾನ್ ಬರ್ಕೋ ಉಪಸ್ಥಿತಿಯಲ್ಲಿ ಈ ಐತಿಹಾಸಿಕ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಆಲ್ಬರ್ಟ್ ಎಂಬಾಕ್‌ಮೆಂಟ್ ಎಂಬ ಪ್ರದೇಶದಲ್ಲಿ ಸ್ಥಾಪಿಸಲಾದ ಬಸವೇಶ್ವರ ಪ್ರತಿಮೆಯು ಬ್ರಿಟನ್‌ನಲ್ಲಿ ಭಾರತದ ಪ್ರಧಾನಿಯೊಬ್ಬರು ಅನಾವರಣಗೊಳಿಸಿದ ಮೊದಲ ಪ್ರತಿಮೆಯಾಗಿದೆ.

ಪ್ರತಿಮೆ ಸ್ಥಾಪನೆ ಯೋಜನೆಗೆ 2012ರ ಏಪ್ರಿಲ್​ನಲ್ಲಿ ಲಂಡನ್ ಬರೋ ಆಫ್ ಲ್ಯಾಂಬೆತ್‌ನ ಯೋಜನಾ ವಿಭಾಗದಿಂದ ಅನುಮೋದನೆ ಸಿಕ್ಕಿತ್ತು. ಬಳಿಕ ಬ್ರಿಟಿಷ್ ಸಾರ್ವಜನಿಕ ಪ್ರತಿಮೆಗಳ ಕಾಯಿದೆ, 1854 ರ ಪ್ರಕಾರ ಬ್ರಿಟಿಷ್ ಕ್ಯಾಬಿನೆಟ್ ಜುಲೈ 2012 ರಲ್ಲಿ ಅನುಮೋದನೆ ನೀಡಲಾಗಿತ್ತು. ಇದು ಬ್ರಿಟಿಷ್ ಸಂಸತ್​ ಬಳಿ ಬ್ರಿಟಿಷ್ ಕ್ಯಾಬಿನೆಟ್ ಅನುಮೋದಿಸಿದ ಮೊದಲ ಪರಿಕಲ್ಪನಾ ಪ್ರತಿಮೆಯೂ ಹೌದು.ಶ್ರೇಷ್ಠ ಭಾರತೀಯ ಹಾಗೂ ಕನ್ನಡದ ಸಾಮಾಜಿಕ ಸುಧಾರಕನ ಪ್ರತಿಮೆ ನೋಡುವುದು ಪ್ರತಿಯೊಬ್ಬ ಭಾರತೀಯ ಮತ್ತು ಕನ್ನಡಿಗನಿಗೆ ಹೆಮ್ಮೆಯ ಸಂಗತಿ ಎಂದು ಖಾದರ್ ಹಾಗೂ ಹೊರಟ್ಟಿ ಸಂತಸ ವ್ಯಕ್ತಪಡಿಸಿದರು. ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನದ ಶ್ರಮ ಮತ್ತು ಪ್ರತಿಮೆ ಸ್ಥಾಪಿಸಿರುವುದಕ್ಕೆ ಇಬ್ಬರೂ ನಾಯಕರು ಧನ್ಯವಾದ ತಿಳಿಸಿದರು. ಯುಕೆ ಮೂಲದ ಸಂಸ್ಥೆಯಾದ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. 2015ರಲ್ಲಿ ಥೇಮ್ಸ್ ನದಿಯ ದಡದಲ್ಲಿ ಬಸವೇಶ್ವರ ಪ್ರತಿಮೆಯನ್ನು ಇದೇ ಫೌಂಡೇಶನ್ ಸ್ಥಾಪಿಸಿದೆ.